ಕ್ರಿಕೆಟ್‌ನ ರೋಚಕ ಕ್ಷಣ ನುಂಗಿ ಹಾಕಿದ ಕೊರೊನಾ

ಬಿ.ಆರ್.ವಿಶ್ವನಾಥ್‌

 

ಫೋರ್, ಸಿಕ್ಸರ್‌ಗಳ ಸುರಿಮಳೆ ಇಲ್ಲ. ಪ್ರೇಕ್ಷಕರು ಕುಣಿದು ಕುಪ್ಪಳಿಸಿ ಆಟಗಾರರನ್ನು ಹುರಿದುಂಬಿಸುವ ಅಭಿಮಾನಿಗಳಿಲ್ಲ. ಕುತೂಹಲ ಮೂಡಿಸುವ ರೋಮಾಂಚನ ಕ್ಷಣಗಳು ಮಾಯವಾಗಿದೆ. ಈ ಎಲ್ಲವನ್ನು ಹೆಮ್ಮಾರಿ ಕೊರೊನಾ ನುಂಗಿ ಹಾಕಿದೆ. ಇಂತಹ ಸಂಕಷ್ಟದಲ್ಲೂ ಈ ಬಾರಿಯ ಐಪಿಎಲ್ ಟೂರ್ನಿ ನಡೆಯುವ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ. ವಿದೇಶದಲ್ಲಾದರೂ ಅಥವಾ ಖಾಲಿ ಕ್ರೀಡಾಂಗಣದಲ್ಲಾದರೂ ಐಪಿಎಲ್ ನಡೆಸಲು ಬಿಸಿಸಿಐ ಉತ್ಸುಕವಾಗಿದೆ.
ಹೌದು. ಭಾರತದಲ್ಲಿ ಮತ್ತು ಕ್ರಿಕೆಟ್ ಆಡುವ ದೇಶಗಳಲ್ಲಿ ಕ್ರಿಕೆಟ್ ಎಂದರೆ ಅಭಿಮಾನಿಗಳಿಗೆ ಪಂಚ ಪ್ರಾಣ. ಅದರಲ್ಲೂ ಏಕದಿನ ಅಥವಾ ಟಿ-೨೦ ಕ್ರಿಕೆಟ್ ಪಂದ್ಯಗಳೆಂದರೆ ಪ್ರೇಕ್ಷಕರಿಗೆ ರಸದೌತಣ. ಆದರೆ ಕಳೆದ ಮೂರು ತಿಂಗಳಿನಿಂದ ಕ್ರಿಕೆಟ್ ಪಂದ್ಯಗಳಿಲ್ಲದೆ ಅಭಿಮಾನಿಗಳು ಸೊರಗಿ ಹೋಗಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ಹೊತ್ತಿಗಾಗಲೇ ಅದರಲ್ಲೂ ಚಿನಕುರಳಿ ಕ್ರಿಕೆಟ್ ಎಂದೇ ಖ್ಯಾತಿಯಾಗಿರುವ ಇಂಡಿಯನ್ ಪ್ರಿಮೀಯರ್ ಲೀಗ್ ಮುಗಿದು ಹೋಗಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-೨೦ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಜಗತ್ತಿನಾದ್ಯಂತ ಮಾರಕ ಕೊರೊನಾ ಸೋಂಕು ಹೆಗಲೇರಿ ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳು ನಿಂತಲ್ಲೇ ನಿಂತಿವೆ.
ಏನೇ ಅಂದುಕೊಂಡರು ಅವೆಲ್ಲವು ಕೇವಲ ಹೇಳಿಕೆಯಾಗುತ್ತಿದೆ ಹೊರತು ಯಾವುದು ಅನುಷ್ಠಾನಗೊಳ್ಳುತ್ತಿಲ್ಲ. ಏಕೆಂದರೆ ಜಗತ್ತಿನಾದ್ಯಂತ ಕೊರೊನಾ ಸೋಂಕು ಅಷ್ಟೊಂದು ವೇಗವಾಗಿ ಹರಡುತ್ತಿದೆ. ಇದು ನಿಯಂತ್ರಣಕ್ಕೆ ಬರುವ ತನಕ ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಡೆಸುವುದು ದೂರದ ಮಾತು.
ಈ ಬಾರಿ ಐಪಿಎಲ್ ಟೂರ್ನಿ ನಡೆದಿಲ್ಲ. ಇದಕ್ಕೆ ಪ್ರಮುಖ ಕಾರಣ ಕೊರೊನಾ. ಇದರಿಂದಾಗಿ ಫ್ರಾಂಚೈಸಿಗಳಿಗೆ ಭಾರೀ ಹೊಡೆತ ಬಿದ್ದಿದೆ. ಐಪಿಎಲ್ ನಡೆಯದಿದ್ದರೆ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಬರೋಬ್ಬರಿ ನಾಲ್ಕು ಸಾವಿರ ಕೋಟಿ ರೂಗಳು ನಷ್ಟ ಅನುಭವಿಸಲಿದೆ. ಹೀಗಾಗಿ ಈ ಟೂರ್ನಿ ನಡೆಸುವುದು ಬಿಸಿಸಿಐಗೆ ಅನಿವಾರ್ಯವಾಗಿದೆ.
ಈಗಾಗಲೇ ಒಂದನೇ ಹಂತದ ಅನ್‌ಲಾಕ್‌ನಿಂದಾಗಿ ಬಹುತೇಕ ಚಟುವಟಿಕೆಗಳು ಆರಂಭಗೊಂಡಿವೆ. ಸಂಪೂರ್ಣವಾಗಿ ದೇಶದಲ್ಲಿ ಅನ್‌ಲಾಕ್ ಆಗಿದ್ದೇ ಆದಲ್ಲಿ ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಸಲು ಸಿದ್ಧರಾಗುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೂಚನೆ ನೀಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. ವಿದೇಶಿ ನೆಲದಲ್ಲಾದರೂ ಐಪಿಎಲ್ ನಡೆಸುವ ಇರಾದೆ ಹೊಂದಿರುವ ಸೌರವ್, ಪಂದ್ಯಗಳು ಪ್ರೈಂ ಟೈಮ್‌ನಲ್ಲಿ ಪ್ರಸಾರವಾಗುವುದರಿಂದ ಟೀವಿ ವೀಕ್ಷಕರ ಕೊರತೆಯಾಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿದೆ ಬಿಸಿಸಿಐ.
ಈ ಬಾರಿಯ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ ಅಕ್ಟೋಬರ್‌ನಲ್ಲಿ ನಡೆಸಲು ತಯಾರಿ ನಡೆಸಿದ್ದೇವೆ. ಅಗತ್ಯ ಬಿದ್ದರೆ ನವೆಂಬರ್ ತಿಂಗಳಲ್ಲು ಸಿದ್ಧರಿದ್ದೇವೆ. ಅದರೆ ಸೆಪ್ಟಂಬರ್‌ನಲ್ಲಿ ಏಷ್ಯಾ ಕಪ್ ಹಾಗೂ ನವೆಂಬರ್‌ನಲ್ಲಿ ಟಿ-೨೦ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಎರಡೂ ಪ್ರಮುಖ ಟೂರ್ನಿಗಳ ಮೇಲೆ ಐಪಿಎಲ್ ಭವಿಷ್ಯ ನಿಂತಿದೆ ಎನ್ನುತ್ತಾರೆ ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಪಟೇಲ್.
ವಿದೇಶಿ ನೆಲವು ಸೇರಿದಂತೆ ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಸಲು ಆಯ್ಕೆಯ ಪ್ರಸ್ತಾಪಕ್ಕೆ ಫ್ರಾಂಚೈಸಿ, ಆಟಗಾರರು, ಪ್ರಸಾರಕರು, ಪ್ರಾಯೋಜಕರು, ವಿದೇಶಿ ಆಟಗಾರರು ಉತ್ಸುಕರಾಗಿದ್ದಾರೆ. ಈ ಎಲ್ಲ ಸಾಧಕ-ಭಾದಕಗಳನ್ನು ಅವಲೋಕಿಸಿ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಐಪಿಎಲ್ ಹಣೆಬರಹ ನಿರ್ಧಾರವಾಗಲಿದೆ.
ಆದರೆ ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಸಲು ಸನ್ನದ್ಧರಾಗುವಂತೆ ಹೇಳಿರುವುದು ಅಭಿಮಾನಿಗಳ ನಿರಾಸೆಗೂ ಕಾರಣವಾಗಿದೆ. ಒಂದು ವೇಳೆ ನಡೆದರೂ ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿದ್ದ ಜೋಶ್ ಇರುವುದಿಲ್ಲ. ಫೋರು, ಸಿಕ್ಸರ್ ಬಾರಿಸದರೆ ಚಿಯರ್ ಗರ್ಲ್ಸ್‌ಗಳ ನರ್ತನ ಇಲ್ಲದೆ ಟೂರ್ನಿ ನಡೆದರೆ ಸಪ್ಪೆಯಾಗಲಿದೆ. ಇವೆಲ್ಲದಕ್ಕೂ ಕೊರೊನಾ ನಿಯಂತ್ರಣಕ್ಕೆ ಬಂದರೆ ಮಾತ್ರ ಸಾಧ್ಯವಾಗಲಿದೆ.

ಕ್ರಿಕೆಟಿಗರು ಸದಾ ಬ್ಯುಸಿ.ವಿದೇಶಿ, ದೇಶಿಯ ಟೂರ್ನಿ ಹಾಗೂ ದೈಹಿಕ ಕ್ಷಮತೆಯಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ರಿಲಾಕ್ಸ್ ಮೂಡ್‌ನಲ್ಲಿದ್ದಾರೆ.
ಆಟಗಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಸಾಧ್ಯವಾಗುವುದೇ ಇಲ್ಲ. ಈಗ ಕೊರೊನಾ ಸೋಂಕಿನಿಂದಾಗಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ. ಹೀಗಾಗಿ ಆಟಗಾರರು ಕುಟುಂಬದೊಂದಿಗೆ ಕಾಲ ಕಳೆಯಲು ಅವಕಾಶ ಲಭಿಸಿದೆ.
ಎಲ್ಲ ಆಟಗಾರರೂ ತಮ್ಮ ಹಿಂದಿನ ಅನುಭವಗಳನ್ನು ಮೆಲುಕು ಹಾಕುತ್ತಿದ್ದಾರೆ. ಇನ್ನೂ ಕೆಲವರು ಇನ್‌ಸ್ಟ್ರಾಗ್ರಾಂನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಚಾಟ್ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಾನು ತಂದೆಯಾಗುವ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇವೆಲ್ಲದರ ನಡುವೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದು ವಿಶೇಷ.

Share

Leave a Comment