ಕ್ರಿಕೆಟ್‌ಗೆ ಮುನಾಫ್ ಪಟೇಲ್ ವಿದಾಯ

ನವದೆಹಲಿ, ನ ೧೦-  ೨೦೧೧ರ ವಿಶ್ವಕಪ್ ತಂಡದಲ್ಲಿ ಆಡಿದ್ದ ಮುನಾಫ್ ಪಟೇಲ್ ಅಂತರಾಷ್ಟ್ರೀಯ ಮಟ್ಟದ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ೧೫ ವರ್ಷಗಳ ಅತ್ಯುತ್ತಮ ಪ್ರದರ್ಶನ ತೋರಿದ್ದ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿ ಮುನಾಫ್ ಪಟೇಲ್, ಸಚಿನ್ ತೆಂಡೂಲ್ಕರ್ ಅವರಿಂದ ಮೆಚ್ಚುಗೆ ಪಡೆದಿದ್ದರು. ೨೦೦೩ ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಟೀಂ ಇಂಡಿಯಾ ಎ ತಂಡದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮುನಾಫ್ ಪಟೇಲ್ ಆಡಿದ್ದರು. ೨೦೦೬ರಲ್ಲಿ ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾದಾರ್ಪಣೆ  ಮಾಡಿದ್ದರು.

ವೃತ್ತಿ ಜೀವನದಲ್ಲಿ ಗಾಯದ ಸಮಸ್ಯೆಗಳಿಂದಲೇ ಹಲವು ಬಾರಿ ತಂಡದಿಂದ ಹೊರಗುಳಿದಿದ್ದ ಮುನಾಫ್, ೧೩ ಟೆಸ್ಟ್, ೭೦ ಏಕದಿನ ಹಾಗೂ ೩ ಟಿ೨೦ ಪಂದ್ಯಗಳನ್ನು ಆಡಿದ್ದಾರೆ. ೨೦೧೧ ರಲ್ಲಿ ಕೊನೆಯ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಬಲಗೈ ವೇಗಿಯಾಗಿದ್ದ ಮುನಾಫ್ ಸದ್ಯ ಆರಂಭವಾಗಲಿರುವ ಟಿ೧೦ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಟೂರ್ನಿಯಲ್ಲಿ ರಾಜಪೂತ್ಸ್ ತಂಡದ ಪರ ಮುನಾಫ್ ಪಟೇಲ್ ಸ್ಥಾನ ಪಡೆದಿದ್ದಾರೆ.

ತಮ್ಮ ನಿವೃತ್ತಿಯ ಘೋಷಣೆ ಬಳಿಕ ಮಾತನಾಡಿದ ಮುನಾಫ್ ಪಟೇಲ್, ನಿವೃತ್ತಿ ಘೋಷಣೆ ಮಾಡಿರುವ ಬಗ್ಗೆ ನನಗೆ ವಿಷಾದ ಇಲ್ಲ. ಏಕೆಂದರೆ ನನ್ನೊಂದಿಗೆ ಆಡಿದ್ದ ಧೋನಿ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಈಗಾಗಲೇ ನಿವೃತ್ತಿ ನೀಡಿದ್ದಾರೆ. ಎಲ್ಲಾ ಆಟಗಾರರು ವೃತ್ತಿ ಜೀವನಕ್ಕೆ ಒಂದಲ್ಲಾ ಒಂದು ದಿನ ನಿವೃತ್ತಿ ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.

೨೦೧೧ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಅಮೋಘ ಬೌಲಿಂಗ್ ಮಾಡುವ ಮೂಲಕ ಮುನಾಫ್ ಎಲ್ಲರ ಗಮನ ಸೆಳೆದಿದ್ದರು. ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ಗೆಲುವಿಗೆ ೧೪ ರನ್ ಅಗತ್ಯವಿತ್ತು. ಮೊದಲ ೩ ಎಸೆತಗಳಲ್ಲಿ ೯ ರನ್ ಗಳಿಸಿ ಗೆಲುವಿನತ್ತ ಮುನ್ನಡೆದಿತ್ತು. ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ಗೆ ೨ ರನ್ ಅಗತ್ಯವಿತ್ತು. ಕೇವಲ ೧ ರನ್ ನೀಡಿದ ಮುನಾಫ್ ಪಂದ್ಯ ಟೈನಲ್ಲಿ ಕೊನೆಗೊಳ್ಳಲು ಕಾರಣರಾದರು. ೨೦೧೧ರ ವಿಶ್ವಕಪ್‌ನಲ್ಲಿ ಮುನಾಫ್ ಒಟ್ಟು ೧೧ ವಿಕೆಟ್‌ಗಳನ್ನು ಪಡೆದು ಝಹೀರ್ ಖಾನ್ ಹಾಗೂ ಯುವರಾಜ್ ಸಿಂಗ್ ಬಳಿಕ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಮೂರನೇ ಆಟಗಾರ ಎನಿಸಿಕೊಂಡಿದ್ದರು.

Leave a Comment