ಕ್ಯಾಲಿಫೋರ್ನಿಯ: ಕಾಡ್ಗಿಚ್ಚಿಗೆ ೨೧ ಬಲಿ

ಸ್ಯಾನ್‌ಫ್ರಾನ್ಸಿಸ್ಕೋ, ಅ.೧೨: ಕ್ಯಾಲಿಫೋರ್ನಿಯದಲ್ಲಿ ವೇಗವಾಗಿ ಹರಡುತ್ತಿರುವ ಕಾಡ್ಗಿಚ್ಚಿಗೆ ಕನಿಷ್ಠ ೨೧ ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ೨೦೦ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

“ಇದೊಂದು ಗಂಭೀರ, ಸಂಕಷ್ಟಮಯ ಹಾಗೂ ದುರಂತಮಯ” ಪ್ರಕೃತಿ ವಿಕೋಪವಾಗಿದೆ ಎಂದು ಕ್ಯಾಲಿಫೋರ್ನಿಯಾದ ಅಗ್ನಿಶಾಮಕ ಮುಖ್ಯಸ್ಥ ಕೆನ್ ಪಿಮ್‌ಲೊಟ್ಟ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಕ್ಟೋಬರ್ ೧೦ರಂದು ಆರಂಭವಾಗಿರುವ ಕಾಡ್ಗಿಚ್ಚು ಮೂರನೇ ದಿನವಾದ ಇಂದು ಕೂಡ ತನ್ನ ಕೆನ್ನಾಲಿಗೆಯನ್ನು ವಿಸ್ತರಿಸಿಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹಾಗೂ ಅದು ಹರಡದಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಭಾರಿ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ಕಾಡ್ಗಿಚ್ಚು ಮತ್ತಷ್ಟು ವೇಗ ಪಡೆದುಕೊಳ್ಳುತ್ತಿದ್ದು, ಇದರಿಂದ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಐದು ವರ್ಷಗಳ ಬರದ ಪರಿಣಾಮ ಇನ್ನೂ ಇಲ್ಲಿದೆ. ಬರದಿಂದಾಗಿ ಇಲ್ಲಿ ಕಾಡ್ಗಿಚ್ಚು ಉಂಟಾಗಿದೆ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿ ರಕ್ಷಣೆ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಭೀಕರ ಕಾಡ್ಗಿಚ್ಚಿಗೆ ಇದುವರೆಗೆ ೨೧ ಮಂದಿ ಬಲಿಯಾಗಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾಡ್ಗಿಚ್ಚಿಗೆ ಅತಿ ಹೆಚ್ಚು ಹಾನಿಗೊಳಗಾಗಿರುವ ಸೊನೊಮ ಕೌಂಟಿಯಲ್ಲಿ ಒಟ್ಟು ೧೧ ಮಂದಿ ಬಲಿಯಾಗಿದ್ದಾರೆ. ಅದೇ ರೀತಿ ನಾಪಾ ಕೌಂಟಿಯಲ್ಲಿ ೬, ಯುಬಾ ಕೌಂಟಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಸಂತಾರೋಸ್‌ನ ನೆರೆಹೊರೆಯ ಪ್ರದೇಶಗಳ ಕೂಡ ಹಾನಿಗೊಳಗಾಗಿದ್ದು, ನೂರಾರು ಮಂದಿ ತಮ್ಮ ಮನೆಮಠಗಳನ್ನು ಕಳೆದುಕೊಂಡಿದ್ದಾರೆ.

ಒಟ್ಟಾರೆ ಕಾಡ್ಗಿಚ್ಚಿಗೆ ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸೊನೊಮ ಕೌಂಟಿಯಿಂದ ೨೫ ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಸೊನೊಮಾ ಮತ್ತು ನಾಪ ಕೌಂಟಿಗಳಲ್ಲಿ ಹಲವು ಮನೆ, ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಕೋಟ್ಯಂತರು ರೂಪಾಯಿ ನಷ್ಟ ಉಂಟಾಗಿದೆ.

ಸೊನೊಮಾದಲ್ಲಿ ಒಟ್ಟು ೬೦೦ ಮಂದಿ ಕಾಣೆಯಾಗಿದ್ದಾರೆ. ಆದರೆ ಅವರಲ್ಲಿ ಅರ್ಧರಷ್ಟು ಜನರು ಸುರಕ್ಷಿತ ಸ್ಥಳದಲ್ಲಿ ಇರಬಹುದು ಎಂದು ನಂಬಲಾಗಿದೆ. ೨೮೫ ಮಂದಿ ಇನ್ನೂ ಕಾಣೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

Leave a Comment