ಕೌಶಲ್ಯಾಭಿವೃದ್ಧಿಗೆ ಪ್ರೋತ್ಸಾಹ : ನಾಗೇಶ್

ಬೆಂಗಳೂರು, ನ. ೧೯- ಇಂದಿನ ತಂತ್ರಜ್ಞಾನ ಯುವಗದಲ್ಲಿ ಯುವ ಸಮುದಾಯ ತಂತ್ರಜ್ಞಾನ
ಆಧಾರಿತ ಕೌಶಲ್ಯವನ್ನು ಹೊಂದುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದೆ ಎಂದು ಅಬಕಾರಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಹೆಚ್. ನಾಗೇಶ್ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ನಡೆದಿರುವ ೨೨ನೇ ಬೆಂಗಳೂರು ಟೆಕ್ ಸಮಾವೇಶದ ೨ನೇ ದಿನವಾದ ಇಂದು ಕೌಶಲ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ತಂತ್ರಜ್ಞಾನ ಯುಗಕ್ಕೆ ಪೂರಕವಾಗಿ ಯುವ ಸಮುದಾಯಕ್ಕೆ ಅಗತ್ಯವಾದ ಕೌಶಲ್ಯಾಭಿವೃದ್ಧಿಯನ್ನು ಒದಗಿಸುವ ಮೂಲಕ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಸಿಗುವಂತೆ ಮಾಡಲು ಸಾಧ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ತನ್ನದೇ ಆದ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಇಡೀ ದೇಶದಲ್ಲೇ ಕರ್ನಾಟಕ ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಇಲಾಖೆಯನ್ನು ರೂಪಿಸಿದೆ. ಜತೆಗೆ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯ ಮೂಲಕ ಪ್ರತಿ ವರ್ಷ ೨.೫ ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಕರ್ನಾಟಕ ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಕ್ಷೇತ್ರವಾರು ಕಚೇರಿ ಮತ್ತು ವೆಬ್ ಪೋರ್ಟಲ್‌ನ್ನು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ ಆಗಿದೆ. ಈ ವೆಬ್ ಪೋರ್ಟಲ್ ಮೂಲಕ ಕೌಶಲ್ಯ ತರಬೇತಿ ಆಕಾಂಕ್ಷಿಗಳು, ಉದ್ಯೋಗಾಕಾಂಕ್ಷಿಗಳು ಮತ್ತು ತರಬೇತಿ ನೀಡುವವರ ನಡುವೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಈ ವೆಬ್ ಪೋರ್ಟಲ್‌ಗೆ ಕೌಶಾಲ್‌ಕರ್ ಎಂಬ ಹೆಸರಿಟ್ಟು ಈ ವೆಬ್‌ಸೈಟನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.
ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ೭೬ ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ಐಟಿಐಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಈಗಿನ ತಂತ್ರಜ್ಞಾನಕ್ಕೆ ಅಗತ್ಯವಾದ ಕೋರ್ಸ್‌ಗಳನ್ನು ಆರಂಭಿಸಲಾಗಿದೆ ಎಂದರು.
ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದಲ್ಲಿ ಇಡೀ ದೇಶದಲ್ಲೇ ಮಾದರಿ ಎನ್ನುವಂತಹ ಕೌಶಲ್ಯ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಜತೆಗೆ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದೇವೆ ಎಂದರು.
ಕರ್ನಾಟಕ ಇಡೀ ದೇಶದಲ್ಲೇ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರಗಳನ್ನು ಹೊಂದಿದ ರಾಜ್ಯವಾಗಿದ್ದು, ಕರ್ನಾಟಕದಲ್ಲಿ ಇಂತಹ ೨೨ ಕೇಂದ್ರಗಳಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಿ, ಈ ಗುಂಪುಗಳಿಗೆ ೨೫೦ ಕೋಟಿ ರೂ.ಗಳ ನಿಧಿಯನ್ನು ನೀಡಿ ಈ ಮೂಲಕ ಮಹಿಳೆಯರ ಕೌಶಲ್ಯಾಭಿವೃದ್ಧಿಗೂ ಗಮನ ಹರಿಸಿ ಈ ಗುಂಪುಗಳು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಅವರು ಹೇಳಿದರು.
ಯುರೋಪ್, ಗಲ್ಫ್, ಸೌತ್ ಈಸ್ಟ್ ಏಷಿಯಾ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಕೌಶಲ್ಯ ಹೊಂದಿದ ಕಾರ್ಮಿಕರಿಗೆ ತುಂಬಾ ಬೇಡಿಕೆ ಇದ್ದು, ಅಲ್ಲಿನ ಬೇಡಿಕೆಗಳಿಗೆ ಅನುಗುಣವಾಗಿ ಕೌಶಲ್ಯ ತರಬೇತಿಯನ್ನು ನೀಡಿ ಯುವಕರಿಗೆ ವಿದೇಶಗಳಲ್ಲೂ ಉದ್ಯೋಗ ಕಲ್ಪಿಸುವ ಕೆಲಸವೂ ನಡೆದಿದೆ ಎಂದು ಅವರು ಹೇಳಿದರು.
ಪ್ರಶಸ್ತಿ ನೀಡಿಕೆ
ಜಾಗತಿಕ ಕೌಶಲ್ಯದಲ್ಲಿ ಚಾಂಪಿಯನ್ ಷಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಪ್ರಣವ್ ಉದಯರ್ಕ್ ನೂತಲಾಪತಿ ಇವರಿಗೆ ೩ ಲಕ್ಷ ನಗದು ಬಹುಮಾನ ಮತ್ತು ಈ ಚಾಂಪಿಯನ್ ಶಿಪ್‌ನಲ್ಲಿ ಪದಕ ಪಡೆದ ಸುಮಂತ್ ಮತ್ತು ಮಂಜುನಾಥ್ ಇವರಿಗೆ ತಲಾ ೧ ಲಕ್ಷ ರೂ.ಗಳ ನಗದು ಬಹುಮಾನವನ್ನು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

Leave a Comment