ಕೋವಿಡ್ 19 ಲಾಕ್ ಡೌನ್; ವಲಸಿಗ ಕಾರ್ಮಿಕರ ಸಂಕಷ್ಟಕ್ಕೆ ಪ್ರಧಾನಿ ವಿಷಾದ

 

ನವದೆಹಲಿ, ಮೇ 31 -ಕೊರೋನಾ ವೈರಸ್ ಹರಡುವುದನ್ನು ತಡೆಯಲು ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಮಾಜದ ಯಾವುದೇ ವರ್ಗ ಈ ಸಾಂಕ್ರಾಮಿಕದಿಂದ ಬಚಾವಾಗಿಲ್ಲ ಎಂದಿದ್ದಾರೆ.
ವಲಸಿಗರು ಮತ್ತು ಬಡವರು ಈ ಸಾಂಕ್ರಾಮಿಕದಿಂದ ಅತಿ ಹೆಚ್ಚು ಕಷ್ಟಕ್ಕೊಳಗಾಗಿದ್ದಾರೆ ಎಂಬ ಅಂಶವನ್ನು ಒಪ್ಪಿಕೊಂಡಿರುವ ಮೋದಿ, ಅವರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದರು.
ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ ನ 65ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ತೊಂದರೆ ಮತ್ತು ಕಷ್ಟಗಳನ್ನು ಎದುರಿಸದ ಯಾವುದೇ ವರ್ಗವಿಲ್ಲ. ಅದರಲ್ಲೂ ಬಡವರು ಮತ್ತು ಕಾರ್ಮಿಕರು ಅತಿ ಹೆಚ್ಚು ಸಂಕಷ್ಟಕ್ಕೊಳಗಾಗಿದ್ದಾರೆ. ಅವರ ನೋವು ಮತ್ತು ಒದ್ದಾಟವನ್ನು ಮಾತುಗಳನ್ನು ವಿವರಿಸಲಾಗದು ಎಂದಿದ್ದಾರೆ.
ಅವರ ನೋವನ್ನು ಅರ್ಥಮಾಡಿಕೊಳ್ಳದವರು ಯಾರಿದ್ದಾರೆ. ಇಡೀ ದೇಶವೇ ಅವರ ಸಮಸ್ಯೆಯನ್ನು ಹಂಚಿಕೊಳ್ಳಲು ಯತ್ನಿಸುತ್ತಿದೆ ಎಂದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಲಕ್ಷಾಂತರ ವಲಸಿಗ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಹಲವರು ಸಾವಿರಾರು ಮೈಲಿಗಳು ನಡೆದು ತಮ್ಮ ಊರಿಗೆ ತಲುಪಿದ್ದಾರೆ. ಅನೇಕ ಮಾರ್ಗಮಧ್ಯದಲ್ಲೇ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಈ ವಲಸಿಗರ ನೆರವಿಗಾಗಿ ಭಾರತೀಯ ರೈಲ್ವೆ ಮೇ 1ರಿಂದ ಶ್ರಮಿಕ್ ವಿಶೇಷ ರೈಲು ಆರಂಭಿಸಿದ್ದು, ಹಲವಾರು ಕಾರ್ಮಿಕರನ್ನು ತವರೂರಿಗೆ ತಲುಪಿಸಿದೆ.

Share

Leave a Comment