ಕೋವಿಡ್ ಪ್ರಭಾವದಿಂದ ಇಂಧನ ದರಗಳು ಏರಿಕೆಯಾಗುತ್ತಿವೆ; ಪ್ರಧಾನ್

ನವದೆಹಲಿ, ಜೂ 29- ಕೋವಿಡ್ ಪ್ರಭಾವದಿಂದಾಗಿ ಇಂಧನ ದರಗಳು ಏರಿಕೆಯಾಗುತ್ತಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಹೇಳಿದ್ದಾರೆ.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರಗಳು ನಿರಂತರ ಏರಿಕೆಯ ವಿರುದ್ದ ಪ್ರತಿಪಕ್ಷ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿ, ಇಂಧನ ದರಗಳ ನಿರಂತರ ಏರಿಕೆಯ ಮೂಲಕ ಕೇಂದ್ರ ಸರ್ಕಾರ ಜನರ ಹಣ ಲೂಟಿ ಮಾಡುತ್ತಿದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ ಬೆನ್ನಲ್ಲೇ ಸಚಿವ ಧರ್ಮೇಂದ್ರ ಪ್ರಧಾನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಜಗತ್ತಿನ ಆರ್ಥಿಕ ವ್ಯವಸ್ಥೆಯ ಜತೆ ಭಾರತದ ಆರ್ಥಿಕ ವ್ಯವಸ್ಥೆಯೂ ಸವಾಲುಗಳನ್ನು ಎದುರಿಸುತ್ತಿದೆ. ಕೋವಿಡ್ ಸಾಂಕ್ರಾಮಿಕ ದಿಂದಾಗಿ ಇಂಧನ ಉದ್ಯಮ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್-ಮೇ ತಿಂಗಳಲ್ಲಿ ಪೆಟ್ರೋಲ್ ಬೇಡಿಕೆ ಶೇಕಡಾ ೭೦ ರಿಂದ ೮೦ರಷ್ಟು ಕುಸಿತ ಕಂಡಿದ್ದು, ಇದು ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಜಗತ್ತಿನಲ್ಲಿ ಇಂಧನ ಬೇಡಿಕೆ ಮತ್ತೆ ವೃದ್ದಿಸಿದೆ. ತೈಲದ ಬೆಲೆಗಳ ಬಗ್ಗೆ ಯಾರೊಬ್ಬರೂ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆ ಸ್ಥಿರವಾಗಿದ್ದರೆ, ಭಾರತದಲ್ಲಿಯೂ ಬೆಲೆಗಳು ಸ್ಥಿರವಾಗುತ್ತವೆ ಎಂದು ನಾವು ಅಂದಾಜು ಮಾಡಬಹುದು ಎಂದು ಹೇಳಿದರು.

Share

Leave a Comment