ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲ: ಭ್ರಷ್ಟಾಚಾರದಲ್ಲಿ ಸರಕಾರ ಭಾಗಿ- ಸಲೀಮ್ ಅಹ್ಮದ್

ಮಂಗಳೂರು, ಮೇ 29 -ರಾಜ್ಯ ಸರಕಾರವು ಕೊವೀಡ್ ನಿಯಂತ್ರಣ ಕಾರ್ಯಚರಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಮಾತ್ರವಲ್ಲದೆ ಕೋವಿಡ್ ಪರಿಹಾರದ ಹೆಸರಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ಅವರು ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರಕ್ಕೆ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಪ್ರತಿಪಕ್ಷ ವಾಗಿ ಕಾಂಗ್ರೆಸ್ ಎಲ್ಲಾ ರೀತಿಯ ಸಹಕಾರ ನೀಡಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಯವರು ಕರೆದ ಮೂರು ಸಭೆಗಳಲ್ಲಿಯೂ ಕಾಂಗ್ರೆಸ್ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದೆ. ಆದರೆ ಪ್ರತಿಪಕ್ಷ ನೀಡಿದ ಯಾವುದೇ ಸಲಹೆ ಸೂಚನೆಗಳನ್ನು ಸರಕಾರ ಪರಿಗಣಿಸಿಲ್ಲ ಎಂದು ಸಲೀಂ ಅಹ್ಮದ್ ದೂರಿದರು.

ಕೋವಿಡ್ ನಿಯಂತ್ರಣ ಕಾರ್ಯಾಚರಣೆ ಹೆಸರಿನಲ್ಲಿ ಖರೀದಿಯಲ್ಲಿ ಹಗರಣ ನಡೆದಿದೆ. ಪರಿಹಾರ ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು ಮತ್ತು ಕೋವಿಡ್ ನಿಧಿ ಬಳಕೆಯ ಬಗ್ಗೆ ಸರಕಾರ ಶ್ವೇತ ಪತ್ರ ಹೊರಡಿಸಬೇಕೆಂದು ಸಲೀಮ್ ಮಹಮ್ಮದ್ ಆಗ್ರಹಿಸಿದರು.

ಬಿಜೆಪಿ ಶಾಸಕರ ಗುಂಪಿನ ಪ್ರತ್ಯೇಕ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಸಲೀಮ್ , ರಾಜ್ಯ ಎದುರಿಸುತ್ತಿರುವ ಕೋವಿಡ್ ದುರಿತ ಕಾಲದಲ್ಲೂ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಆರಂಭಗೊಂಡಿದ್ದು , ಮಂತ್ರಿಗಿರಿಗಾಗಿ ಬಿಜೆಪಿ ಶಾಸಕರು ಗುಂಪುಗಾರಿಕೆ ನಡೆಸುತ್ತಿರುವುದು ಈ ಸಂಕಷ್ಟ ಸಮಯದ ದುರಂತವೇ ಆಗಿದೆ ಎಂದವರು ಹೇಳಿದರು.

ಪ್ರತ್ಯೇಕ ಸಭೆ ನಡೆಸಿರುವ ಬಿಜೆಪಿ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂಬ ಮಾಹಿತಿ ಬಗ್ಗೆ ಅವರು ಉತ್ತರಿಸಲು ನಿರಾಕರಿಸಿದರು, ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ ಪ್ರತಿಕ್ರಿಯೆ ನೀಡಬಲ್ಲರು ಎಂದರು.

ಜೂನ್ 7 ರಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು , ಆ ದಿನ ಬೆಂಗಳೂರಿನಲ್ಲಿ ಜನಸಂದಣಿಯಾಗಬಾರದೆಂಬ ಉದ್ದೇಶದಿಂದ ಪದಾಧಿಕಾರಿಗಳು ಮತ್ತು ಶಾಸಕರು ಬೆಂಗಳೂರಿನ ಸಭೆಯಲ್ಲಿ ಭಾಗವಹಿಸುತ್ತಾರೆ. ಪಕ್ಷದ ಕಾರ್ಯಕರ್ತರಿಗಾಗಿ ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಲೀಂ ಅಹ್ಮದ್‌ ವಿವರಿಸಿದರು.

Share

Leave a Comment