ಕೋವಿಡ್‌-19 ಮಧ್ಯೆಯೇ ಅಂತಿಮ ವರ್ಷದ ಪರೀಕ್ಷೆ ನಡೆಸಲು ರಾಜ್ಯಪಾಲರ ಸೂಚನೆಗೆ ರಾಜ್ ಠಾಕ್ರೆ ಗರಂ

ಮುಂಬೈ, ಮೇ 26 – ಕೋವಿಡ್‌-19 ಬಿಕ್ಕಟ್ಟಿನ ಮಧ್ಯೆಯೇ ರಾಜ್ಯದ ವಿಶ್ವವಿದ್ಯಾಲಯಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸೂಚಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಂಗಳವಾರ , ರಾಜ್ಯಪಾಲರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವ ಅವಿವೇಕದ ಬೇಡಿಕೆ ಈಗ ಏಕೆ? ಯಾರಿಗಾಗಿ?” ಎಂದು ಠಾಕ್ರೆ ಪತ್ರದಲ್ಲಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

“ಇದರ ಹಿಂದಿನ ತರ್ಕ ಏನು. ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಅಂತಿಮ ವರ್ಷದ ಪರೀಕ್ಷೆಗಳನ್ನು ಒಟ್ಟಾರೆಯಾಗಿ ರದ್ದುಗೊಳಿಸುವ ನಿರ್ಧಾರವನ್ನು ಏಕೆ ತೆಗೆದುಕೊಳ್ಳಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.

ಅಂತಿಮ ವರ್ಷದ ಪರೀಕ್ಷೆಗಳನ್ನು ರದ್ದು ಮಾಡಲು ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ ಶಿಫಾರಸು ಮಾಡಿದ್ದಕ್ಕಾಗಿ ರಾಜ್ಯ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ವಿರುದ್ಧ ಕಳೆದ ವಾರ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಠಾಕ್ರೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿರುವ ರಾಜ್ಯಪಾಲ ಕೊಶಿಯಾರಿ, ಸಚಿವ ಸಮಂತ್ ಅವರ ಬೇಡಿಕೆಯು ವಿವಿಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ಎಂದು ಆಕ್ಷೇಪಿಸಿದ್ದರು. ಬಳಿಕ ರಾಜ್ಯಪಾಲರು ಇದೇ ವಿಷಯದ ತಮ್ಮ ಅಸಮಾಧಾನವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ವ್ಯಕ್ತಪಡಿಸಿದ್ದರು

Share

Leave a Comment