ಕೋವಿಡ್‌ 19: ದುಬೈಯಿಂದ ಬಂದಿದ್ದ ಭಟ್ಕಳದ ಯುವಕ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಮಂಗಳೂರು, ಏ.6 -ದುಬೈಯಿಂದ ಮಾರ್ಚ್ 19ರಂದು ಮಂಗಳೂರಿಗೆ ಬಂದಾಗ ಕೋವಿಡ್‌ 19 ಸೋಂಕು ಇರುವುದು ದೃಢಪಟ್ಟ ಭಟ್ಕಳದ ಯುವಕ ಇದೀಗ ಸಂಪೂರ್ಣ ಗುಣಮುಖವಾಗಿದ್ದು, ಇಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.

ವೆನ್ಲಾಕ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳದ 22ರ ಹರೆಯ ಯುವಕ ಇದೀಗ ಸಂಪೂರ್ಣ ಗುಣಮುಖನಾಗಿದ್ದು, ಇದೀಗ ನಡೆಸಿದ ಎರಡು ಬಾರಿ ಟೆಸ್ಟ್‌ನಲ್ಲಿ ಕೊರೋನ ನೆಗಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸದಾಶಿವ ತಿಳಿಸಿದ್ದಾರೆ.

ಮಾ.19ರಂದು ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಬಂದಿದ್ದ ಭಟ್ಕಳದ ಯುವಕನಲ್ಲಿ ಮಾ.22ರಂದು ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ 14 ದಿನಗಳ ನಿಗಾ ಅವಧಿ ಪೂರೈಸಿದ್ದು, ಗುಣಮುಖನಾಗಿದ್ದಾರೆ. ಆತನ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಎ.2 ಮತ್ತು 3ರಂದು ಹೀಗೆ ಮತ್ತೆ ಎರಡು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಆತನ ದ್ರವದ ಮಾದರಿಯ ವರದಿಯು ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಎ.6ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

Leave a Comment