‘ಕೋಳಿ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದಲ್ಲ, ತಿನ್ನಲೇಬೇಡಿ’ ಬಾಬಾ ರಾಮ್‌ದೇವ್ ಕರೆ

ಉಡುಪಿ, ನ.೧೯- ‘ಕೋಳಿಯ ಹೊಟ್ಟೆಯ ಒಳಗೆ ಕೆಟ್ಟ ರಕ್ತದಿಂದ ಸೃಷ್ಟಿಯಾಗುವ ಮತ್ತು ಗಲೀಜು ಸ್ಥಳದಿಂದ ಹೊರಗೆ ಬರುವ ಮೊಟ್ಟೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮಲವೇ ಹೊರತು ಯಾವುದೇ ರೀತಿಯ ಪ್ರೊಟೀನ್ ಅಲ್ಲ’ ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಪರ್ಯಾಯ ಪಲಿಮಾರು ಮಠ ಹಾಗೂ ಹರಿದ್ವಾರದ ಪತಂಜಲಿ ಯೋಗ ಪೀಠ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮೂರನೇ ದಿನವಾದ ನಿನ್ನೆ ಸಂಜೆ ನಡೆದ ಮಹಿಳಾ ಮತ್ತು ಮಕ್ಕಳ ವಿಶೇಷ ಯೋಗ ಶಿಬಿರದಲ್ಲಿ ಅವರು ಮಾತನಾಡುತಿದ್ದರು.

ಈ ಜಗತ್ತಿನಲ್ಲಿ ಶಾಖಾಹಾರವೇ ಶ್ರೇಷ್ಠ ಹಾಗೂ ಸಾತ್ವಿಕವಾದ ಆಹಾರ. ಮಾಂಸಾಹಾರದಿಂದ ಮನಸ್ಸಿನಲ್ಲಿ ಕೆಟ್ಟ ವಿಚಾರ ಹಾಗೂ ಯೋಚನೆಗಳು ಮೂಡುತ್ತದೆ. ಆದರೆ ಸಸ್ಯಾಹಾರದಿಂದ ಸಾತ್ವಿಕ ವಿಚಾರಗಳು ಬರುತ್ತದೆ. ಆದುದರಿಂದ ಒಳ್ಳೆಯ ಆಹಾರ ಸೇವನೆಯಿಂದ ಉತ್ತಮರಾಗಲು ಸಾಧ್ಯವಾಗುತ್ತದೆ. ಕೋಕಾಕೋಲ ಎಂಬುದು ಟಾಯ್ಲೆಟ್ ಕ್ಲೀನರ್. ಅದರಿಂದ ನಮ್ಮ ದೇಹಕ್ಕೆ ಬೇಕಾದ ಯಾವುದೇ ಕ್ಯಾಲ್ಸಿಯಂ, ಪ್ರೋಟೀನ್ ಸಿಗುವುದಿಲ್ಲ ಎಂದರು. ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ ಯೋಗ ಎಂಬುದು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಮುಸ್ಲಿಮ್, ಕ್ರಿಶ್ಚಿಯನ್ನರಿಗೂ ವಿಸ್ತರಿಸಿದ ಕೀರ್ತಿ ಬಾಬಾ ರಾಮ್‌ದೇವ್ ಅವರಿಗೆ ಸಲ್ಲುತ್ತದೆ. ಬದುಕಲು ಆಸೆ ಇರುವ ಎಲ್ಲರಿಗೂ ಯೋಗ ಅತ್ಯಗತ್ಯವಾಗಿದೆ. ಯೋಗದ ಮೂಲಕ ಭಗವಂತನ ದರ್ಶನ ಸಾಧ್ಯ ಎಂದು ಹೇಳಿದರು.

Leave a Comment