ಕೋಳಿ ಉದ್ಯಮದಲ್ಲಿ ತೊಡಗಿರುವ ರೈತರ ನೆರವಿಗೆ ಒತ್ತಾಯ

ದಾವಣಗೆರೆ.ನ.30; ಬಹುರಾಷ್ಟ್ರೀಯ ಹಾಗೂ ದೇಶಿಯ ಕೋಳಿ ಮಾಂಸ ತಯಾರಿಕಾ ಮತ್ತು ಮಾರಾಟ ಕಂಪನಿಗಳ ಹಾವಳಿಯಿಂದ ಕೋಳಿ ಉದ್ಯಮ ನಷ್ಟದಲ್ಲಿದೆ. ಆದ್ದರಿಂದ ರಾಜ್ಯ ಸರ್ಕಾರ ಕೋಳಿ ಉದ್ಯಮದಲ್ಲಿ ತೊಡಗಿರುವ ರೈತರ ಹಿತಕಾಪಾಡ ಬೇಕೆಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರದ ದೇವರಾಜ್ ಒತ್ತಾಯಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ನಡೆದ ಕೋಳಿ ಸಾಕಾಣಿಕೆ ರೈತರ ಸಭೆಯಲ್ಲಿ ಮಾತನಾಡಿದ ಅವರು ಬಹು ರಾಷ್ಟ್ರೀಯ ಕಂಪನಿಗಳ ಹಾವಳಿಯಿಂದ ಕೋಳಿ ಮಾಂಸ ದರ ಕುಸಿದಿದೆ. ಇದು ಕೋಳಿ ಉದ್ಯಮದಲ್ಲಿ ತೊಡಗಿರುವ ರೈತರಿಗೆ ಆರ್ಥಿಕವಾಗಿ ನಷ್ಟವುಂಟು ಮಾಡುತ್ತಿದೆ.ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ 30 ಸಾವಿರ ಕುಟುಂಬಗಳು ಕೋಳಿ ಉದ್ಯಮವನ್ನು ಅವಲಂಭಿಸಿವೆ. ಬಹುರಾಷ್ಟ್ರೀಯ ಕಂಪನಿಗಳಿಂದ ಈ ಕುಟುಂಬಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಉದ್ಯಮದಿಂದ ತಮಗೆ ನಷ್ಟವಾಗುತ್ತಿದೆ ಎಂದು ಹೇಳುತ್ತಿರುವ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಪರಿಶೀಲನೆ ನಡೆಸಿದರೆ ಕಂಪನಿಗಳು ಎಷ್ಟು ಲಾಭದಲ್ಲಿವೆ ಎನ್ನುವುದು ತಿಳಿಯುತ್ತದೆ.

ಕಂಪನಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾಂಸದ ಮಾರುಕಟ್ಟೆಯನ್ನು ತನ್ನ ಹಿಡಿತದಲ್ಲಿ ಹೊಂದುವ ಉದ್ದೇಶದಿಂದ ದಿನಕ್ಕೊಂದು ದರವನ್ನು ಅಂತರ್ ಜಾಲದಲ್ಲಿ ನಿಗದಿಪಡಿಸಿ ಮಾರಾಟ ಮಾಡುವ ಹುನ್ನಾರ ನಡೆಸುತ್ತಿದೆ. ಇದರಿಂದ ಸ್ಥಳಿಯ ಕೋಳಿ ಸಾಗಣಿಕೆದಾರರು ಆತಂಕದಲ್ಲಿದ್ದಾರೆ. ಬಂಡವಾಳ ಶಾಹಿ ಕಂಪನಿಗಳು ರಾಷ್ಟ್ರ ಮತ್ತು ರಾಜ್ಯದಲ್ಲಿ ಅಕ್ರಮವಾಗಿ ಈ ಉದ್ಯಮದಲ್ಲಿ ತೊಡಗಿಕೊಂಡು ಸರ್ಕಾರಕ್ಕೂ ಯಾವುದೇ ರೀತಿಯ ತೆರಿಗೆ ಪಾವತಿಸದೇ ಹಾಗೂ ಉದ್ಯಮದ ಮಾಹಿತಿ ನೀಡದೇ ಕಾನೂನು ಬಾಹಿವಾಗಿ ವ್ಯವಹರಿಸುತ್ತಿದೆ ಎಂದು ದೂರಿದರು. ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ಮುಂದಾಗಬೇಕೆಂದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಒ.ಜಿ.ಗುರುಮೂರ್ತಿ, ರೈತ ಜಯಾನಾಯ್ಕ ಉಪಸ್ಥಿತರಿದ್ದರು.

Leave a Comment