ಕೋಳಿಫಾರ್ಮ್ ತೆರವಿಗೆ ಆಗ್ರಹ-ರಸ್ತೆ ತಡೆ-ಪ್ರತಿಭಟನೆ

ದಾವಣಗೆರೆ, ಆ.23- ಕೋಳಿ ಫಾರ್ಮ್ ತೆರವಿಗೆ ಅಗ್ರಹಿಸಿ ಶ್ರೀ ಜೈ ಹನುಮಾನ್ ನಾಗರೀಕ ಹಿತರಕ್ಷಣಾ ವೇದಿಕೆ (ರಿ) ನೇತೃತ್ವದಲ್ಲಿ ಗ್ರಾಮಸ್ಥರು ಶಾಮನೂರು ಬಳಿಯ ದೇವರ ಬೆಳಕೆರೆ ರಸ್ತೆಯಲ್ಲಿರುವ ಕೆ.ಪಿಎಂ ಕೋಳಿ ಫಾರ್ಮ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ದೇವರ ಬೆಳಕೆರೆ ರಸ್ತೆಯಲ್ಲಿರುವ ಕೆ.ಪಿ.ಎಂ ಪೌಲ್ಟ್ರೀ ಫಾರ್ಮ್‍ನಿಂದಾಗಿ ಶಾಮನೂರು, ಡಾಲರ್ಸ್ ಕಾಲೋನಿ, ಜೆ.ಹೆಚ್.ಪಾಟೇಲ್ ಬಡಾವಣೆ, ವಾಜಪೇಯ ಬಡಾವಣೆ, ಎಸ್.ಎ.ರವೀಂದ್ರನಾಥ್ ಬಡಾವಣೆ, ಬನಶ್ರೀ ಬಡಾವಣೆಯಲ್ಲಿ ಜನರು ಜೀವನ ಮಾಡುವುದೇ ದುಸ್ತರವಾಗಿದೆ. ನಿವಾಸಿಗಳು ನೆಮ್ಮದಿಯ ಬದುಕು ಸಾಗಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಯೋವೃದ್ದರು, ಮಕ್ಕಳು ಮಹಿಳೆಯರು ಪದೇ ಪದೇ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ವಿಪರೀತ ನೊಣಗಳ ಹಾವಳಿಯಿಂದಾಗಿ ಶುದ್ಧ ಆಹಾರ ಸೇವಿಸುವುದು ಕಷ್ಟಕರವಾಗಿದೆ. ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದೇವೆ. ಪದೇ ಪದೇ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇದೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇಲ್ಲಿಯ ಜನರ ಆರೋಗ್ಯ ಹಾಳಾಗುತ್ತಿರುವುದರಿಂದ ದುಡಿಯುವವರೆ ಇಲ್ಲದಂತ ಪರಿಸ್ಥಿತಿ ಇದೆ. ಪಾಲಿಕೆ ಅಧಿಕಾರಿಗಳು ಕೋಳಿಫಾರ್ಮ್ ಮಾಲೀಕರ ನೆರವಿಗೆ ನಿಂತಿದ್ದಾರೆ. 10ವರ್ಷದಿಂದ ಮರುನವೀಕರಣ ಹಾಗೂ ಕಂದಾಯ ಪಾವತಿಸದೆ ಬಂಡವಾಳಶಾಹಿಗಳು ಗೆಲುವು ಸಾಧಿಸುತ್ತಿದ್ದಾರೆ.  ಈ ಕುರಿತಾಗಿ ಜಿಲ್ಲಾಡಳಿತ ಹಾಗೂ ನಗರ ಪಾಲಿಕೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಪರಿಣಾಮ ಮಾತ್ರ ಶೂನ್ಯವಾಗಿದೆ. ಬಡಾವಣೆ ನಿವಾಸಿಗಳ ಜೀವದ ಜೊತೆ ಆಟವಾಡುತ್ತಿದ್ದಾರೆ. ಕೂ‌ಡಲೇ ಕೋಳಿಫಾರ್ಮ್ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೃಷ್ಣೋಜಿರಾವ್, ಕೊಟ್ರೇಶ್, ಧನರಾಜ್, ಸಿ.ಅಮರೇಶ್, ವಿಶ್ವನಾಥ್, ಶಶಿಕುಮಾರ್, ಅಂಬುರಾಜ್, ಜಗದೀಶ್, ಗಣೇಶಾಚಾರಿ, ಶೇಷಾಚಾರಿ, ಛಾಯಾಬಾಯಿ ಸೇರಿದಂತೆ ಅನೇಕರು ಇದ್ದರು.

Leave a Comment