ಕೋಮುವಾದಿ ಶಕ್ತಿಗಳ ಸೋಲಿಸಲು ಕರೆ

ತುಮಕೂರು, ಸೆ. ೧೦- ದೇಶದಲ್ಲಿ ಬೇರು ಬಿಟ್ಟಿರುವ ಕೋಮುವಾದಿ ಶಕ್ತಿಗಳನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕು. ಇಲ್ಲದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಪ್ರೊ.ಜಿ.ಎಂ. ಶ್ರೀನಿವಾಸಯ್ಯ ಅಭಿನಂದನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಪ್ರೊ. ಜಿ.ಎಂ.ಎಸ್. 85 ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಕೆ.ಈ. ಸಿದ್ದಯ್ಯ ರಚಿಸಿರುವ ಬತ್ತದ ತಿಳಿನೀರ ಹಾದಿ ಕಿರುಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶದಲ್ಲಿ ಫ್ಯಾಸಿಸ್ಟ್ ಮತ್ತು ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರೇ ಇಡೀ ಕೇಂದ್ರ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಸಹ್ರಾಬುದ್ದೀನ್ ಎನ್‍ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ಅಮಿತ್ ಶಾ ಕೇಂದ್ರ ಸರ್ಕಾರದ ಆಡಳಿತವನ್ನು ನಿಯಂತ್ರಿಸುತ್ತಿದ್ದಾರೆ. ನಿಜವಾಗಿಯೂ ಪ್ರಧಾನಿ ನರೇಂದ್ರ ಮೋದಿ ವಿದೇಶ ಸುತ್ತುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದರು.

ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದಲ್ಲಿ ಅಮಿತ್ ಶಾ ಪ್ರಮುಖ ಆರೋಪಿ. ಆದರೂ ಅವರಿಗೆ ಶಿಕ್ಷೆಯಾಗಿಲ್ಲ. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೂ ಕೊಲೆಯಾದರು. ಪ್ರಕರಣದ ಪ್ರಮುಖ ಸಾಕ್ಷಿಗಳು ಹತ್ಯೆಯಾದರು. ಯಾವ ಪ್ರಕರಣದಲ್ಲೂ ಆರೋಪಿಗಳಿಗೆ ಶಿಕ್ಷೆಯಾಗಲಿಲ್ಲ ಎಂದರು.

ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರ ಸ್ಫೂರ್ತಿ ನಮಗೆ ದಾರಿ ದೀಪವಾಗಬೇಕು. ಇಂತಹ ನೈತಿಕ ಶಕ್ತಿಯ ಮೇಲೆ ಮುಂದಿನ ಚುನಾವಣೆಯತನಕ ನಿರಂತರ ಕಾರ್ಯಕ್ರಮಗಳನ್ನು ಹಾಕಿಕೊಂಡು ಲೋಕಸಭೆ ಚುನಾವಣೆಗೆ ಎಲ್ಲರೂ ಸಜ್ಜಾಗಬೇಕು. ಕೋಮುವಾದಿ ಶಕ್ತಿಗಳ ನಿರ್ಮೂಲನೆಗೆ ಪಣ ತೊಡಬೇಕು ಎಂದು ಕರೆ ನೀಡಿದರು.

ಜನಪರ ಚಿಂತಕ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ಮಾತನಾಡಿ, ನನ್ನಂಥವರಿಗೆ ಜಿಎಂಎಸ್ ಮತ್ತು ದೊರೈರಾಜ್ ಆತ್ಮಸಾಕ್ಷಿಗಳು. ಅಂಥವರ ಮಾರ್ಗದರ್ಶದಲ್ಲಿ ನಾವು ಮುನ್ನಡೆಯಬೇಕು. ಜಿ.ಎಂ.ಶ್ರೀನಿವಾಸಯ್ಯ ನಂಬಿದ ನಂಬಿಕೆಯಂತೆ ಬದುಕಿ ತೋರಿಸಿದರು. ಕಷ್ಟದ ಹಾದಿಯಲ್ಲಿ ಬಂದ ಜಿಎಂಎಸ್‍ಗೆ ಸಿನಿಕತನವಿಲ್ಲ. ಹಾಗಾಗಿ ಅವರು ಇಂದಿಗೂ ನಮಗೆ ಮಾದರಿಯಾಗಿದ್ದಾರೆ. ಅವರಿಗೆ ಸಾಕಷ್ಟು ಅರ್ಹತೆ ಹೊಂದಿದ್ದರೂ ಅವರ ಅರ್ಹತೆಗೆ ತಕ್ಕ ಗೌರವ ಸಿಗಲಿಲ್ಲ ಎಂದರು.

ಜಿಎಂಎಸ್ ಮತ್ತು ದೊರೈರಾಜ್ ಎಂದೂ ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳಲಿಲ್ಲ. ಜಿಎಂ.ಎಸ್. ಬರೆಯಬಹುದಿತ್ತು. ಈಗಲೂ ಅವರಿಗೆ ಅವಕಾಶವಿದೆ. ಅವರು ಬರೆಯಬೇಕೆಂಬುದು ನಮ್ಮ ಒತ್ತಾಯ. ಬರವಣಿಗೆಯಲ್ಲಿ ಸುಖ ಇರುತ್ತದೆ. ಬರೆದ ಬರಹಗಳಿಗೆ ಬರುವ ಪ್ರತಿಕ್ರಿಯೆಗಳು ಟಾನಿಕ್ ಇದ್ದಂತೆ. ಅವು ಜೀವನಕ್ಕೆ ಸ್ಪೂರ್ತಿ ತುಂಬುತ್ತವೆ ಎಂದರು.

ನಕ್ಸಲರು ಹೋಗುವ ಹಾದಿಯ ಬಗ್ಗೆ ನಮಗೆ ನಂಬಿಕೆ ಇಲ್ಲ. ಅವರು ಎತ್ತುವ ಪ್ರಶ್ನೆಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಭಯೋತ್ಪಾದನೆ, ನಕ್ಸಲ್ ಹಿಂಸೆಗಿಂತ ಜಾತಿ ಹಿಂಸೆ, ಕ್ರೌರ್ಯ ಅಪಾಯಕಾರಿ. ಜಾತಿ ಹಿಂಸೆಯಿಂದ ಹೆಚ್ಚು ಕೊಲೆಗಳು ನಡೆಸಿವೆ. ಹಿಂಸಾಚಾರ ನಡೆದಿದೆ. ಜಾತಿಯ ಹಿಂಸೆಯಲ್ಲಿ ಬಲಿಯಾದವರ ಸಂಖ್ಯೆ ಅತಿ ಹೆಚ್ಚು. ಅದರ ಬಗ್ಗೆ ನಾವು ಮಾತನಾಡುವುದಿಲ್ಲ. ನಿಜವಾಗಿಯೂ ಚರ್ಚೆಯಾಗಬೇಕಾಗಿರುವುದು ಜಾತಿ ಹಿಂಸೆಯ ಪ್ರಶ್ನೆ ಎಂದರು. ಜನಪರ ಚಿಂತಕ ಪ್ರೊ.ಕೆ. ದೊರೈರಾಜ್ ಮಾತನಾಡಿ, ಜ್ಞಾನ, ವಿವೇಕ ಮತ್ತು ಮಾನವೀಯತೆಯ ಪ್ರತೀಕ ಜಿ.ಎಂ.ಎಸ್. ಅವರನ್ನು ಮೇಸ್ಟ್ರು ಅಂತಲೇ ಎಲ್ಲರೂ ಕರೆಯುವುದು. ಅವರಿಂದ ಕಲಿಯಬೇಕಾದುದು ಬಹಳಷ್ಟಿದೆ. ಶೈಕ್ಷಣಿಕವಾಗಿ ಅವರು ಆಕರ ಗ್ರಂಥ. ಯಾವುದೇ ವಿಷಯದ ಕುರಿತು ಬೇಕಾದರೂ ನಿರರ್ಗಗಳವಾಗಿ ಮಾತನಾಡುವ ವಿಷಯ ಸ್ಪಷ್ಟತೆ ಅವರಿಗಿದೆ. ಮೇಷ್ಟ್ರಾಗಿ, ಪ್ರಿನ್ಸಿಪಾಲರಾಗಿ, ಯಶಸ್ವಿ ಆಡಳಿತಗಾರ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ಜನಪರ ಹೋರಾಟಗಳಲ್ಲಿ ಭಾಗಿಯಾಗುತ್ತಾರೆ. ಪ್ರಭುತ್ವದ ಲೋಪಗಳ ಬಗ್ಗೆ ನಿರ್ಭೀತರಾಗಿ ಮಾತನಾಡುವ ಶಕ್ತಿ ಇದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಗುಬ್ಬಿಯಲ್ಲಿ ಹುಟ್ಟಿ, ಬೆಳೆದು, ಶಿಕ್ಷಣ ಪಡೆದು ಮೈಸೂರಿಗೆ ಹೋಗಿ ಜಾತಿಯ ಅವಮಾನಕ್ಕೆ ಒಳಗಾಗಿ ಛಲ ಸಾಧಿಸಿ ಎಂ.ಎ. ಮುಗಿಸಿದ ಮತ್ತು ಅಂದಿನ ಶಿಕ್ಷಕ ವೃಂದವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಭೂಮಿ ಬಳಗದ ಜಿ.ಎಸ್.ಸೋಮಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಲೇಖಕಿ ಮಲ್ಲಿಕಾ ಬಸವರಾಜ್, ಕಾರ್ಮಿಕ ಮುಖಂಡ ಬಿ.ಉಮೇಶ್, ಡಾ. ಅರುಂಧತಿ, ಮಾರುತಿ ಪ್ರಸಾದ್, ಎಚ್.ವಿ. ಮಂಜುನಾಥ್, ಸೈಯದ್ ಮುಜೀಬ್ ಮತ್ತಿತರರು ಉಪಸ್ಥಿತರಿದ್ದರು.

Leave a Comment