ಕೋಟ ಜೋಡಿ ಕೊಲೆ ಹಂತಕರಿಗೆ ಪೊಲೀಸ್ ನೆರವು

ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿ ಜೈಲುಪಾಲು

ಉಡುಪಿ, ಫೆ.೧೧- ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಇತ್ತೀಚೆಗೆ ನಡೆದ ಭರತ್ ಕುಮಾರ್ ಮತ್ತು ಯತೀಶ್ ಕಾಂಚನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಪವನ್ ಅಮೀನ್ ಮತ್ತು ವೀರೇಂದ್ರ ಆಚಾರ್ಯ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರನ್ನು ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಇದರೊಂದಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.

ಪವನ್ ಅಮೀನ್ ಹಾಗೂ ವೀರೇಂದ್ರ ಆಚಾರ್ಯ ಅವರು ಕೊಲೆ ಪ್ರಕರಣದ ಆರೋಪಿಗಳಾದ ಕೋಟ ಠಾಣೆ ವ್ಯಾಪ್ತಿಯ ರೌಡಿಗಳಾದ ಹರೀಶ್ ರೆಡ್ದಿ, ರಾಜಶೇಖರ ರೆಡ್ಡಿ, ಮಹೇಶ ಗಾಣಿಗ, ಸಂತೋಷ ಕುಂದರ್ ಮುಂತಾದವರೊಂದಿಗೆ ಒಡನಾಟ ಹೊಂದಿದ್ದರು. ಕೊಲೆ ನಡೆದ ಜನವರಿ ೨೬ರಂದು ರಾತ್ರಿ ಆರೋಪಿಗಳು ಅವಿತುಕೊಳ್ಳಲು ಪವನ್ ಅಮೀನ್ ಹೆಬ್ರಿಯ ಕುಚ್ಚೂರಿನಲ್ಲಿರುವ ತನ್ನ ಮನೆಯಲ್ಲಿ ಅವಕಾಶ ಕಲ್ಪಿಸಿದ್ದ. ಮರುದಿನ ಬೆಳಗ್ಗೆ ಹರೀಶ್ ರೆಡ್ಡಿಯು ಪವನ್ ಅಮೀನ್‌ಗೆ ದೂರವಾಣಿ ಕರೆ ಮಾಡಿ ಮೊಬೈಲ್ ಫೋನ್ ಮತ್ತು ಸಿಮ್ ಸಹಿತ ಕೆಲವು ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಕೇಳಿದ್ದ. ಅದರಂತೆ ಅವುಗಳನ್ನು ಪ್ರಣವ್ ಭಟ್ ಎಂಬಾತನ ಮೂಲಕ ಪವನ್ ಕಳುಹಿಸಿಕೊಟ್ಟಿದ್ದ ಎಂದು ಎಸ್ಪಿ ತಿಳಿಸಿದ್ದಾರೆ.

ಜ.೨೭ರಂದು ರಾತ್ರಿ ಪವನ್ ಅಮೀನ್ ಇನ್ನೋರ್ವ ಆರೋಪಿ ವೀರೇಂದ್ರನೊಂದಿಗೆ ಸೇರಿ ಕೊಲೆ ಆರೋಪಿಗಳಿಗೆ ಕಾರ್ ವ್ಯವಸ್ಥೆ ಮಾಡಿದ್ದ. ಬಳಿಕ ಆರೋಪಿಗಳನ್ನು ಆಗುಂಬೆ ಎನ್.ಆರ್.ಪುರದ ಮಲ್ಲಂದೂರಿನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಜ.೨೮ರಂದು ಅಲ್ಲಿಗೆ ಕರೆದೊಯ್ದಿದ್ದರು. ಅಲ್ಲಿಂದ ಪವನ್ ಮತ್ತು ವೀರೇಂದ್ರ ವಾಪಸ್ ಆಗಿದ್ದು ಆರೋಪಿ ಹರೀಶ್ ರೆಡ್ಡಿ ಕೊಟ್ಟಿದ್ದ ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ತಂದು ಬಚ್ಚಿಟ್ಟಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ. ಇಬ್ಬರನ್ನೂ ನಿನ್ನೆ ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರ್, ಮೊಬೈಲ್ ಫೋನ್ ಸಹಿತ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.೧೫ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ಸೂತ್ರಧಾರ ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

Leave a Comment