ಕೋಟಿಗೊಬ್ಬ-೨ ಇದು ನಿಶ್ಯಬ್ದ-೨

ಸುದೀಪ್ ನಟಿಸಿದ್ದ ಕೋಟಿಗೊಬ್ಬ-೨ ಚಿತ್ರಕ್ಕೂ ಮೊದಲು ಕೋಟಿಗೊಬ್ಬ ಅನ್ನೊಂಥ ಚಿತ್ರವನ್ನು ಯಾರೂ ಮಾಡಿರಲಿಲ್ಲ. ಇದು ಹಾಗೇನೇ ನಿಶ್ಯಬ್ದ-೨ ಇದಕ್ಕೆ ಮೊದಲು ನಿಶ್ಯಬ್ದ ಚಿತ್ರವನ್ನು ನಾನು ನಿರ್ದೇಶನ ಮಾಡಿಲ್ಲ, ವಿಷ್ಣುವರ್ಧನ್ ಸರ್ ಅಭಿನಯಿಸಿದ್ದ ೧೯೯೦ರಲ್ಲಿ ತೆರೆಗೆ ಕಂಡಿದ್ದ ನಿಶ್ಯಬ್ದ ಚಿತ್ರಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಚಿತ್ರದ ಟೈಟಲ್ ಆಕರ್ಷಿಸಿದರೆ ಹೀಗೊಂದು ಸಿನೆಮಾ ಮಾಡುತ್ತಿದ್ದಾರೆನ್ನುವುದು ಗೊತ್ತಾಗಿ ಹೆಚ್ಚು ಪ್ರಚಾರಕ್ಕೆ ಸಿಗುತ್ತದೆ ಆಗ ಜನರು ಸಿನೆಮಾ ನೋಡಲು ಚಿತ್ರ ಮಂದಿರಕ್ಕೆ ಬರುತ್ತಾರೆ ಇದು ನಿರ್ದೇಶಕ ದೇವರಾಜ್ ತರ್ಕ.

ಇದು ಎಷ್ಟರಮಟ್ಟಿಗೆ ಸರಿ ಎನ್ನುವುದಕ್ಕೆ ಪ್ರೇಕ್ಷಕರೇ ಮುಂದೆ ಚಿತ್ರ ತೆರೆಕಂಡಾಗ ಉತ್ತರಿಸಬೇಕಾಗುತ್ತದೆ. ಆದರೆ ಅದೇ ಪ್ರೇಕ್ಷಕರು ಡೇಂಜರ್ ಜೋನ್ ಚಿತ್ರಕ್ಕೆ ನೀಡಿದ್ದ ಉತ್ತಮ ಪ್ರತಿಕ್ರಿಯೆಯಿಂದಾಗಿಯೇ ಬಹುತೇಕ ಅದೇ ಚಿತ್ರತಂಡವನ್ನು ಇಟ್ಟುಕೊಂಡು ಈ ಸಿನೆಮಾ ಮಾಡಲು ಹೊರಟಿರುವ ದೇವರಾಜ್ ವಿಷ್ಣುವರ್ಧನ್ ಚಿತ್ರದಲ್ಲಿ ಬಳಸಿರುವಂತೆ ಇದರಲ್ಲಿ ನಾಯಿಯನ್ನು ಒಂದು ಪಾತ್ರವಾಗಿ ಬಳಸಿಕೊಳ್ಳುತ್ತಿದ್ದಾರಂತೆ. ಚಿತ್ರದ ಆರಂಭಕ್ಕೇ ಪ್ರಚಾರ ಸಿಗಲೆಂದು ಅವರು ಆ ನಾಯಿಯು ಸೇರಿದಂತೆ ಚಿತ್ರದ ಫೊಟೋಶೂಟ್ ಮಾಡಿಸಿದರು. ರ್‍ಯಾಟ್ ವಿಲ್ಲರ್ ಜಾತಿಯ ರೆಮೋ ಎನ್ನುವ ಹೆಸರಿನ ನಾಯಿಯೂ ನಾಯಕ ರೂಪೇಶ್ ಶೆಟ್ಟಿ ಮತ್ತು ನಾಯಕಿ ನತಾಷ ಜೊತೆಗೆ ಫೊಟೋಶೂಟ್‌ನಲ್ಲಿ ಭಾಗವಹಿಸಿತ್ತು.

ನಾಯಕರಾಗಿರುವ ರೂಪೇಶ್ ಶೆಟ್ಟಿ ದೇವರಾಜ್ ಜೊತೆ ಕೆಲಸ ಮಾಡುತ್ತಿರುವ ಮೂರನೇ ಚಿತ್ರವಿದು. ಕಳ್ಳತನ ಮಾಡಲು ಹೋಗಿ ಇನ್ನೇನೋ ನಡೆಯುತ್ತದೆ. ರಾಬರಿ ಸಬ್ಜೆಕ್ಟ್ ಇರುವಂಥ ಕತೆ ಸಿನೆಮಾ ನೋಡಿದಾಗ ಪ್ರೇಕ್ಷಕರಿಗೆ ವಿಭಿನ್ನತೆ ಕಾಣುತ್ತದೆ.

ಒಳ್ಳೆ ಕಥಾವಸ್ತು ಇರುವ ಸಿನೆಮಾ ಇದಾಗಲಿದೆ ಎನ್ನುವ ಭರವಸೆಯಲ್ಲಿದ್ದಾರೆ ರೂಪೇಶ್. ಜೊತೆಗೆ ಅವರಿಂದಾಗಿಯೇ ಚಿತ್ರ ನಿರ್ಮಾಣಕ್ಕೆ ಇಳಿದಿರುವ ತಾರಾನಾರ್ಥ ಶೆಟ್ಟಿ ಬೊಳಾರ್ ಕನಿಷ್ಠ ಬಜೆಟ್‌ನಲ್ಲಿ ಒಳ್ಳೆ ಸಿನೆಮಾ ಕೊಡುತ್ತೇವೆ ಎನ್ನುವ ನಂಬಿಕೆ ಇಟ್ಟಿದ್ದಾರೆ. ಅವಿನಾಶ್  ಮೊದಲ ಬಾರಿಗೆ ಕುರುಡನಾಗಿ ನಟಿಸಲು ಅವಕಾಶ ಸಿಕ್ಕಿರುವ ಜೊತೆಗೆ ಕಥೆ ಇಷ್ಟವಾಗಿದ್ದರಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ.

ನತಾಷ ಮೂಲತಃ ಮುಂಬೈನವರು ಆದರೆ ದಕ್ಷಿಣ ಭಾರತದಲ್ಲಿ ನಾಯಕಿಯಾಗಿ ಚಿತ್ರರಂಗದಲ್ಲಿ ಪರೀಕ್ಷೆಗೊಟ್ಟಿಕೊಳ್ಳುತ್ತಿದ್ದಾರೆ. ನಿಶ್ಯಬ್ದ ಚಿತ್ರಕ್ಕೆ ಮೊದಲು ಮಲೆಯಾಳಂನಲ್ಲಿ ನಟಿಸಿದ್ದಾರೆ. “ಮೊದಲು ಬಾಲಿವುಡ್‌ನಲ್ಲಿಯೇ ನಟಿಸಬಹುದಿತ್ತಲ್ಲಾ?” ಎನ್ನುವುದಕ್ಕೆ “ನಾನು ಬಾಲ ನಟಿ ಎಂಟು ವರ್ಷವಿದ್ದಾಗಿನಿಂದ ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದಿದ್ದೇನೆ. ಎಲ್ಲಿ ಒಳ್ಳೆ ಅವಕಾಶ ಸಿಗುತ್ತೋ ಅಲ್ಲಿ ನಟಿಸಬೇಕಲ್ವಾ?” ಹೀಗೆಂದು ದುಂಡು ಮುಖದ ಈ ಚೆಲುವೆ ಕಣ್ಣರಳಿಸಿ ಮರು ಪ್ರಶ್ನಿಸುತ್ತಾರೆ.

ನಿಶ್ಯಬ್ದ ಚಿತ್ರದ ಕಥೆ ಅವರಿಗೆ ಇಷ್ಟವಾಗಿದೆಯಂತೆ ಜೊತೆಗೆ ಪಾತ್ರ ಚಾಲೇಂಜಿಂಗ್ ಆಗಿದೆಯಂತೆ. ಅಲ್ಲದೆ ತಮ್ಮ ನಿಜವಾದ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಅಂದರೆ ಭಿನ್ನವಾಗಿ ತೆರೆ ಮೇಲೆ ಕಾಣಿಸಿಕೊಳ್ಳುವುದು ಚಾಲೇಂಜಿಗ್ ಎನ್ನುತ್ತಾರೆ. ಉದಾಹರಿಸುವುದಾದರೆ ನಿಜವಾಗಿ ಸಿಗರೇಟ್ ಸೇದಿ ಗೊತ್ತಿಲ್ಲ ಆದರೆ ಚಿತ್ರಕ್ಕಾಗಿ ಸಿಗರೇಟ್ ಸೇದಿ ಹೊಗೆ ಬಿಡುವುದು, ಜೊತೆಗೆ ರೆಮೋ(ನಾಯಿ) ಜೊತೆಗೆ ಫೈಟ್ ಮಾಡುವ ದೃಶ್ಯಗಳು ಇದೆಯಂತೆ.

ಇದು ಚಿತ್ರಕ್ಕೆ ಸಂಬಂಧಿಸಿದ್ದಾದರೆ, “ಮಲೆಯಾಳಂ ಭಾಷೆ ತಕ್ಕಮಟ್ಟಿಗೆ ಕಲಿತಿದ್ದೇನೆ ಈಗ ಇಲ್ಲಿ ನಟಿಸುತ್ತಿರುವುದರಿಂದ ಕನ್ನಡವನ್ನು ಕಲಿಯಬೇಕು ಇದು ಸಧ್ಯಕ್ಕೆ ತಮ್ಮ ಮುಂದಿರುವ ಚಾಲೇಂಜ್ ಎನ್ನುವಂಥ ಕನ್ನಡ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಹೀಗೆ ಕನ್ನಡಕ್ಕೆ ವಲಸೆ ಬಂದ ಅದೆಷ್ಟೋ ನಟಿಯರು ಇಲ್ಲಿಯೇ ಭದ್ರ ಬುನಾದಿ ಕಟ್ಟಿಕೊಂಡಿದ್ದಾರೆ ಜೊತೆಗೆ ಮುಂಬೈಗೆ ಓಡಾಡಿಕೊಂಡು ಕನ್ನಡ ಸಿನೆಮಾಗಳಿಗೆ ಮೊದಲ ಆಧ್ಯತೆ ಕೊಟ್ಟುಕೊಂಡಿರುವ ಪಾರುಲ್ ತರಹದ ನಟಿಯರೂ ಇದ್ದಾರೆ. ಇವೆರಡರಲ್ಲಿ ನತಾಷ ಯಾವ ಪಟ್ಟಿಗಾದದರೂ ಸೇರುತ್ತಾರಾ? ಇಲ್ಲವಾ? ಎನ್ನುವುದನ್ನು ಕಾದುನೋಡಬೇಕು.

ಅಂದಹಾಗೆ ನತಾಷ ದಂತವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ ಮುಂಬೈನಲ್ಲಿಯೇ ಪ್ರಾಕ್ಟೀಸ್ ಮಾಡುತ್ತಿದ್ದಾರಂತೆ. ದಂತವೈದ್ಯೆ ಆದರೂ ಸಿನೆಮಾಕ್ಕೆ ತಮ್ಮ ಮೊದಲ ಆದ್ಯತೆ ಎನ್ನುವಷ್ಟು ಸಿನೆಮಾ ಆಸಕ್ತಿ ಇರುವುದರಿಂದ ಇಲ್ಲಿಂದ ಅಂದರೆ ದಕ್ಷಿಣ ಭಾರತದಿಂದ ನಾಯಕಿಯಾಗಿ ಸಿನೆಮಾ ಜರ್ನಿ ಆರಂಭಿಸಿದ್ದಾರೆ.

Leave a Comment