ಕೊ‌ಡಗು ಸಂತ್ರಸ್ತರಿಗೆ 1 ಲಕ್ಷ ರೂ ದೇಣಿಗೆ

ಕೆ.ಆರ್.ಪೇಟೆ,ಆ.30- ಅದ್ದೂರಿಯಾಗಿ ಗ್ರಾಮ ದೇವತೆ ಹಬ್ಬ ಆಚರಣೆ ಮಾಡಿ ನೆಂಟರಿಗೆ ಊಟ ಹಾಕಿಸಬೇಕೆಂಬ ಉದ್ದೇಶದಿಂದ ಕೂಡಿಟ್ಟಿದ್ದ 1ಲಕ್ಷ ರೂಗಳನ್ನು ಮಳೆಯ ನೀರಿನ ಪ್ರವಾಹದಿಂದ ಸಂತ್ರಸ್ತರಾಗಿರುವ ಕೊಡಗಿನ ಜನರಿಗೆ ದೇಣಿಗೆಯಾಗಿ ನೀಡುವ ಮೂಲಕ ತಾಲೂಕಿನ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮಶಂಕರೇಗೌಡ ಅವರು ಸಂತ್ರಸ್ಥರ ನೆರವಿಗೆ ದಾವಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಲ್ಲದೆ ಈ ಭಾರಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವುದಾಗಿ ತಿಳಿಸಿದ್ದಾರೆ.
ತಮ್ಮ ಪುತ್ರ ಸಮಾಜ ಸೇವಕ ಮೊಟ್ಟೆ ಮಂಜು ಅವರೊಂದಿಗೆ ತಾಲೂಕು ಕಚೇರಿಗೆ ತೆರಳಿ ತಾವು ಕೂಡಿಟ್ಟು ಮನೆಯಲ್ಲಿ ಇಟ್ಟಿದ್ದ 1ಲಕ್ಷ ರೂಗಳ ಜೊತೆಗೆ ಪುತ್ರನ 1ಸಾವಿರ ರೂ ಸೇರಿ ಒಟ್ಟು 1ಲಕ್ಷದ 1ಸಾವಿರ ರೂಪಾಯಿಗಳನ್ನು ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್ ಅವರಿಗೆ ನೀಡಿ ಕೊಡಗು ಸಂತ್ರಸ್ಥರ ಖಾತೆಗೆ ಜಮಾ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಅವರು ನಾನು ಪ್ರತಿ ವರ್ಷದಂತೆ ಗ್ರಾಮದೇವರ ಹಬ್ಬಕ್ಕೆಂದು 1ಲಕ್ಷ ರೂಗಳನ್ನು ಖರ್ಚು ಮಾಡಲು ಸಿದ್ದತೆ ಮಾಡಿಕೊಂಡಿದ್ದೆವು. ಆದರೆ ಕೊಡಗಿನಲ್ಲಿ ಪ್ರವಾಹದಿಂದ ಉಂಟಾಗಿರುವ ಸಂಕಷ್ಟದಲ್ಲಿ ನಾವು ಅದ್ದೂರಿಯಾಗಿ ಆಚರಿಸುವುದು ಸರಿಯಲ್ಲ ಎಂದು ನಿರ್ಧರಿಸಿದೆನು. ಇದನ್ನು ಪುತ್ರ ಮೊಟ್ಟೆ ಮಂಜು ಅವರೊಂದಿಗೆ ಚರ್ಚಿಸಿದಾಗ ಇದೇ ಹಣವನ್ನು ಕೊಡಗಿನ ಸಂತ್ರಸ್ಥರಿಗೆ ನೀಡೋಣ ಎಂದು ಪುತ್ರ ಮಂಜು ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಉಪತಹಸೀಲ್ದಾರ್ ಲಕ್ಷ್ಮೀಕಾಂತ್ ಅವರನ್ನು ಬೇಟಿ ಮಾಡಿ 1ಲಕ್ಷದ 1ಸಾವಿರ ರೂಗಳನ್ನು ದೇಣಿಗೆಯಾಗಿ ನೀಡಿದ್ದೇವೆ. ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಿ ಲಕ್ಷಾಂತರ ರೂಪಾಯಿ ಹಣವನ್ನು ಪೋಲು ಮಾಡುವ ಬದಲಿಗೆ ಸಂಕಷ್ಠದಲ್ಲಿರುವ ಕೊಡಗಿನ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದು ಹೆಚ್ಚು ಸಂತಸವನ್ನುಂಟು ಮಾಡಿದೆ ಜೊತೆಗೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಮತ್ತು ನೌಕರರ ಒಂದು ತಿಂಗಳ ವೇತನ ನೀಡಲು ಮುಂದಿನ ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡು ಅದನ್ನೂ ಸಹ ಕೊಡಗಿನ ಸಂತ್ರಸ್ಥರ ನಿಧಿಗೆ ನೀಡಲು ಕ್ರಮ ವಹಿಸುವುದಾಗಿ ದೇವಮ್ಮ ಅವರು ತಿಳಿಸಿದರು.

Leave a Comment