ಕೊಹ್ಲಿ ಬದಲಿಗೆ ತೆಂಡೂಲ್ಕರ್‌ ಆಯ್ಕೆಗೆ ಕಾರಣ ಹೇಳಿದ ಗಂಭೀರ್

ನವದೆಹಲಿ, ಮೇ 21-ಟೀಮ್‌ ಇಂಡಿಯಾ ಕ್ಯಾಪ್ಟನ್ ವಿರಾಟ್‌ ಕೊಹ್ಲಿ ಮತ್ತು ಮಾಜಿ ಕ್ರಿಕೆಟಿಗ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಕ್ರಿಕೆಟ್‌ ದೇವರಿಗೆ ಮಣೆ ಹಾಕುವುದಾಗಿ ಭಾರತ ತಂಡದ ಮಾಜಿ ಓಪನರ್‌ ಗೌತಮ್‌ ಗಂಭೀರ್‌ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನ ನಿಯಮಗಳಲ್ಲಿ ಆಗಿರುವ ಬದಲಾವಣೆಗಳು ಮತ್ತು ಸಚಿನ್‌ ಭಾರತೀಯ ಕ್ರಿಕೆಟ್‌ನಲ್ಲಿ ಸಲ್ಲಿಸಿರುವ ಸುದೀರ್ಘಾವಧಿಯ ಸೇವೆಯನ್ನು ಗಮನದಲ್ಲಿ ಇರಿಸಿ ತೆಂಡೂಲ್ಕರ್‌ ಅವರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಸ್ಟಾರ್‌ ಸ್ಪೋರ್ಟ್ಸ್‌ನ ಕ್ರಿಕೆಟ್‌ ಕನೆಕ್ಟೆಡ್‌ ಕಾರ್ಯಕ್ರಮದಲ್ಲಿ ಗಂಭೀರ್‌ ವಿವರಿಸಿದ್ದಾರೆ.

ಎರಡೂವರೆ ದಶಕ ಕಾಲ ಭಾರತ ತಂಡದ ಪರ ಸೇವೆ ಸಲ್ಲಿಸಿ ಕ್ರಿಕೆಟ್‌ ದೇವರು ಎಂದೇ ಅಭಿಮಾನಿಗಳ ಮನದಲ್ಲಿ ನೆಲೆಸಿರುವ ಮಾಸ್ಟರ್‌ ಬ್ಲಾಸ್ಟರ್‌ ಏಕದಿನ ಕ್ರಿಕೆಟ್‌ ಒಂದರಲ್ಲೇ 463 ಪಂದ್ಯಗಳನ್ನು ಆಡಿದ್ದು 49 ಶತಕಗಳನ್ನು ಒಳಗೊಂಡ 18 ಸಾವಿರಕ್ಕೂ ಅಧಿಕ ರನ್‌ಗಳನ್ನು ಬಾರಿಸಿದ್ದಾರೆ. ಮತ್ತೊಂದೆಡೆ ವಿರಾಟ್‌ ಕೊಹ್ಲಿ ಕೂಡ ಅಷ್ಟೇ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು, 248 ಒಡಿಐಗಳಲ್ಲಿ 43 ಶತಕಗಳ ನೆರವಿನಿಂದ 12 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಚಚ್ಚಿದ್ದಾರೆ.

“ನನ್ನ ಆಯ್ಕೆ ಸಚಿನ್‌ ತೆಂಡೂಲ್ಕರ್. ಏಕೆಂದರೆ 50 ಓವರ್‌ಗಳಲ್ಲಿ ಒಂದೇ ವೈಟ್‌ ಬಾಲ್. ನಾಲ್ಕು ಫೀಲ್ಡರ್‌ಗಳು 30 ಯಾರ್ಡ್‌ ಒಳಗೆ ಉಳಿದ 5 ಫೀಲ್ಡರ್‌ಗಳು ಹೊರಗೆ ಇದ್ದ ಸಮಯದಲ್ಲೇ ಹೆಚ್ಚು ಬ್ಯಾಟ್‌ ಮಾಡಿರುವ ಕಾರಣ ಸಚಿನ್‌ ನನ್ನ ಆಯ್ಕೆ. ಆದರೆ ವಿರಾಟ್‌ ಕೊಹ್ಲಿ ಕೂಡ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಅಂದಹಾಗೆ ನಿಯಮಗಳ ಬದಲಾವಣೆಯನ್ನೂ ಇಲ್ಲಿ ಗಮನಿಸಬೇಕು. ಇದರಿಂದ ಬ್ಯಾಟ್ಸ್‌ಮನ್‌ಗಳಿಗೆ ಬಹಳ ನೆರವಾಗಿದೆ,” ಎಂದು ಗಂಭೀರ್ ಹೇಳಿದ್ದಾರೆ.

Leave a Comment