ಕೊವಿಡ್‍-19 ಲಾಕ್‌ಡೌನ್‌ಗೆ ಪ್ರಧಾನಿಯವರ ಪ್ಯಾಕೇಜ್‍ ಜನರಿಗೆ ಕ್ರೂರ ಅಣಕ-ಸೋನಿಯಾ ಗಾಂಧಿ

ನವದೆಹಲಿ, ಮೇ 22 -ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸರ್ಕಾರ ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟಿದ್ದು, ಎಲ್ಲಾ ಅಧಿಕಾರ ಇದೀಗ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಕೇಂದ್ರೀಕೃತವಾಗಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಸಂವಿಧಾನದ ಅವಿಭಾಜ್ಯ ಅಂಗವಾಗಿರುವ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಸರ್ಕಾರ ಮರೆತಿದೆ. ಸಂಸತ್ತಿನ ಉಭಯ ಸದನಗಳು ಅಥವಾ ಸ್ಥಾಯಿ ಸಮಿತಿಗಳ ಸಭೆ ಕರೆಯುವ ಯಾವುದೇ ಸೂಚನೆಗಳಿಲ್ಲ ಎಂದು ಅವರು ಹೇಳಿದ್ದಾರೆ.
‘ಮಿತ್ರರೇ, ರಚನಾತ್ಮಕ ಟೀಕೆ ಮತ್ತು ಸಲಹೆಗಳನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಜನರ ಧ್ವನಿಯಾಗಿರಿ. ಆ ಉತ್ಸಾಹದಲ್ಲಿಯೇ ನಾವು ಇಂದು ಭೇಟಿಯಾಗುತ್ತಿದ್ದೇವೆ, ‘’ ಎಂದು ಸೋನಿಯಾ ಗಾಂಧಿ 22 ಸಮಾನ ಮನಸ್ಕ ಪಕ್ಷಗಳನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಆರಂಭಿಕ ಭಾಷಣ ಮಾಡಿ ಹೇಳಿದ್ದಾರೆ.
ಕೊರೊನಾವೈರಸ್ ಮೊದಲೇ ಭಾರತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಯಿಂದ ಜನರು ಹೆಚ್ಚುತೊಂದರೆಗೊಳಾಗಿದ್ದು, ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ವೈರಸ್ ವಿರುದ್ಧದ ಹೋರಾಟ 21 ದಿನಗಳಲ್ಲಿ ಕೊನೆಗೊಳ್ಳಲಿದೆ ಎಂಬ ಪ್ರಧಾನ ಮಂತ್ರಿಯವರ ಆರಂಭಿಕ ಆಶಾವಾದ ಸುಳ್ಳಾಗಿದೆ ಎಂದು ಸೋನಿಯಾ ಗಾಂಧಿ ಗುಡುಗಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಮಾಯಾವತಿಯವರ ಬಹುಜನ ಸಮಾಜ ಪಕ್ಷ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಗಳು ಸಭೆಯಲ್ಲಿ ಭಾಗವಹಿಸರಿಲಿಲ್ಲ.
ವೈರಸ್‍ ನಿರ್ಮೂಲನೆಗೆ ಲಸಿಕೆ ದೊರೆಯುವವರೆಗೂ ಪೀಡೆ ತೊಲಗುವುದಿಲ್ಲ. ಲಾಕ್‌ಡೌನ್‌ಗಳ ಮಾನದಂಡಗಳ ಬಗ್ಗೆ ಸರ್ಕಾರ ಅನಿಶ್ಚಿತವಾಗಿತ್ತು. ಅಲ್ಲದೆ, ಯಾವುದೇ ಕಾರ್ಯತಂತ್ರವನ್ನೂ ಹೊಂದಿಲ್ಲ. ಪರೀಕ್ಷಾ ಕಾರ್ಯತಂತ್ರ ಮತ್ತು ಪರೀಕ್ಷಾ ಕಿಟ್‌ಗಳ ಆಮದಿನ ಬಗ್ಗೆಯೂ ಸರ್ಕಾರ ಎಡವಿದೆ, ಸಾಂಕ್ರಾಮಿಕ ರೋಗ ಹಾನಿಯನ್ನು ಮುಂದುವರೆಸಿದೆ ಎಂದು ಸೋನಿಯಾಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಎ.ಕೆ.ಆಂಟನಿ, ಗುಲಾಮ್ ನಬೀ ಆಜಾದ್, ಅಧೀರ್ ರಂಜನ್ ಚೌಧರಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಅಹ್ಮದ್ ಪಟೇಲ್ ಎಚ್.ಡಿ.ದೇವೇಗೌಡ (ಜೆಡಿಎಸ್), ಮಮತಾ ಬ್ಯಾನರ್ಜಿ, ಡೆರೆಕ್ ಒ’ಬ್ರಿಯೆನ್ (ಎಐಟಿಸಿ); ಶರದ್ ಪವಾರ್, ಪ್ರಫುಲ್ ಪಟೇಲ್ (ಎನ್‌ಸಿಪಿ); ಸಂಜಯ್ ರಾವತ್‍ (ಶಿವಸೇನೆ); ಸೀತಾರಾಮ್ ಯೆಚೂರಿ (ಸಿಪಿಐ-ಎಂ), ಹೇಮಂತ್ ಸೊರೆನ್ (ಜೆಎಂಎಂ), ಡಿ ರಾಜಾ (ಸಿಪಿಐ) ಮತ್ತು ಎಂ.ಕೆ.ಸ್ಟಾಲಿನ್ (ಡಿಎಂಕೆ) ಸಭೆಯಲ್ಲಿ ಭಾಗವಹಿಸಿದ್ದರು

Leave a Comment