ಕೊಳವೆಬಾವಿ ನೀರು ಕುಡಿದು 36 ಜನ ಅಸ್ವಸ್ಥ

 

ಕಲಬುರಗಿ,ಜೂ.11-ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗುಡೂರ್ ಎಸ್.ಎ.ತಾಂಡಾದಲ್ಲಿ ಕೊಳವೆಬಾವಿ ನೀರು ಕುಡಿದು 36 ಜನ ಅಸ್ವಸ್ಥರಾಗಿದ್ದಾರೆ.

ಅಸ್ವಸ್ಥರನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ ಕಡಿಮೆ ಇದ್ದು ಒಂದೇ ಹಾಸಿಗೆ ಮೇಲೆ ಇಬ್ಬರು, ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದಲ್ಲಿರುವ ಕೊಳವೆಬಾವಿ ನೀರು ಕುಡಿದು ಅಸ್ವಸ್ಥರಾಗಿದ್ದು, ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿದೆ. ಕೊಳವೆಬಾವಿ ನೀರು ಕಲುಷಿತವಾಗಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಸುದ್ದಿ ತಿಳಿದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆಯ ವ್ಯವಸ್ಥೆ ಮಾಡಲು ಮತ್ತು ಹೆಚ್ಚಿನ ವೈದ್ಯರನ್ನು ನಿಯೋಜಿಸುವಂತೆ ಮನವಿ ಮಾಡಿದರು.

 

Leave a Comment