ಕೊಳಗೇರಿ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಕಲಿಕಾ ಕಾರ್ಯಾಗಾರ

ಚಿತ್ರದುರ್ಗ.ಜೂ.19; ಯಾವುದೇ ಭಾಷೆಯನ್ನು ಕಲಿಯಲು ಮಡಿವಂತಿಕೆ ಎಂಬುದು ಇರುವುದಿಲ್ಲ. ಜಗತ್ತಿನ ಯಾವ ಭಾಷೆಯನ್ನೂ ಸಹ ಶ್ರೇಷ್ಠ-ಕನಿಷ್ಠ ಎಂದು ಪರಿಗಣಿಸಲು ಸಾಧ್ಯವಿಲ್ಲ. ಯಾವುದೇ ಭಾಷೆಗೆ ಹೋಲಿಸಿದರೆ ಮಾತೃಭಾಷೆ ಸಹಜವಾಗಿ ಮೇಲುಗೈ ಸಾಧಿಸುತ್ತದೆ. ಆದರೆ ಇಂಗ್ಲಿಷ್ ತನ್ನ ವಿಶಿಷ್ಟ ಗುಣಗಳಿಂದಾಗಿ ವಿಶ್ವದ ಆಕರ್ಷಣೀಯ ಭಾಷೆಯಾಗಿ ಬೆಳೆದಿದೆ ಎಂದು ಲೇಖಕ ಹಾಗೂ ಉಪನ್ಯಾಸಕ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು. ನಗರದ ಬುದ್ಧನಗರದÀ ಕೊಳಗೇರಿ ಪ್ರದೇಶದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಹ್ಯಾಪಿ ಸ್ಕೂಲ್) ವಿದ್ಯಾರ್ಥಿಗಳಿಗೆ ಸ್ಪೆಕ್ ಎಜುಕೇಷನ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಇಂಗ್ಲಿಷ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಿಜಿಟಲ್ ಇಂಡಿಯಾದಂತಹ ಪರಿಕಲ್ಪನೆಯೊಂದಿಗೆ ಮುನ್ನುಗ್ಗುತ್ತಿರುವ ನಮ್ಮ ದೇಶದ ಶೇಕಡಾ 90% ರಷ್ಟು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿರುವುದರ ಜೊತೆಗೆ ಕೀಳರಿಮೆಯ ಮನೋಭಾವವನ್ನು ಸೃಷ್ಠಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಷ್ಟೇ ಅಲ್ಲದೆ ನಗರ ಪ್ರದೇಶಗಳ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ಸಹ ಇಂಗ್ಲಿಷ್ ಕಲಿಕೆಯ ಕಠಿಣ ಸವಾಲುಗಳನ್ನು ಎದುರಿಸವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಸ್ವಾಗತಾರ್ಹವಾಗಿದ್ದು, ಸಮಾಜದ ಶಿಕ್ಷಣ ತಜ್ಞರು, ಉತ್ಸಾಹಿ ಯುವಕರು ಶಿಕ್ಷಕರ ಜೊತೆ ಕೈಜೊಡಿಸಬೇಕಿದೆ. ಕನ್ನಡ ಭಾಷೆಯು ಪ್ರೀತಿ, ಆದರಗಳನ್ನು ಕಲಿಸಿಕೊಟ್ಟರೆ, ಇತರ ಭಾಷೆಗಳು ಜ್ಞಾನವನ್ನು ಹೆಚ್ಚಿಸಬಲ್ಲವು ಎಂದು ತಿಳಿಸಿದ ಯೋಗೀಶ್ ಸಹ್ಯಾದ್ರಿ ಇಂಗ್ಲಿಷ್ ಭಾಷೆಗೆ ವಿಶ್ವವನ್ನು ಒಗ್ಗೂಡಿಸುವ ಶಕ್ತಿಯಿದೆ ಎಂದು ಅರುಹಿದರು. ಶಾಲೆಯ ಮುಖ್ಯಶಿಕ್ಷಕಿ ಅನ್ನಪೂರ್ಣ ಮಾತನಾಡಿ ಎಲ್ಲ ಭಾಷೆಗಳು ಕಲಿಯಲು ಸುಲಭ. ಆದರೆ ಕಲಿಯುವ ಹುಮ್ಮಸ್ಸು ಇರಬೇಕು. ಈ ಕಾರ್ಯದಲ್ಲಿ ಶಿಕ್ಷಕರು ಪ್ರೇರಣೆ ನೀಡಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದಿ ಅಸಾಮಾನ್ಯ ಸಾಧನೆ ಮಾಡಿರುವ ಅಸಂಖ್ಯಾತ ಉದಾಹರಣೆಗಳಿವೆ. ಕೊಳಚೆ ಪ್ರದೇಶಗಳ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆದೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದ ಅವರು ಯೋಗೀಶ್ ಸಹ್ಯಾದ್ರಿಯವರಂತಹ ಯುವ ಚೇತನಗಳ ಅವಶ್ಯಕತೆ ಸಮಾಜಕ್ಕೆ ಬಹಳಷ್ಟಿದೆ. ಸಹ್ಯಾದ್ರಿಯವರ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸುವ ಕಾರ್ಯ ಇತರರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಂಪಯ್ಯನಮಾಳಿಗೆ ಗೊಲ್ಲರಹಟ್ಟಿ ಮುಖ್ಯಶಿಕ್ಷಕ ಜಯಣ್ಣ.ಹೆಚ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ತರಗತಿಗಳ ಅವಶ್ಯಕತೆಯಿದ್ದು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸುತ್ತವೆ. ಈ ರೀತಿಯ ಕಾರ್ಯಾಗಾರಗಳಿಗೆ ಇಲಾಖೆ ಸ್ಪಂದಿಸುತ್ತದೆ ಎಂದ ಅವರು ಸ್ಪೆಕ್ ಶಿಕ್ಷಣ ಸಂಸ್ಥೆಯ ದಿಟ್ಟ ಹೆಜ್ಜೆಯನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment