ಕೊಳಗೇರಿ ನಿವಾಸಿಗಳಿಗೆ ಸ್ವಂತ ಮನೆ ನಿರ್ಮಾಣ ಕಾಮಗಾರಿ

ಅರಸೀಕೆರೆ, ಫೆ. ೧೧-ನಗರ ಪ್ರದೇಶವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಅನುಗುಣವಾಗಿ ನಗರಸಭೆ ಕುಡಿಯುವ ನೀರಿನ ಜತೆಗೆ ರಸ್ತೆ ಚರಂಡಿ, ವಿದ್ಯುತ್ ದೀಪಗಳ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆ ಕಲ್ಪಿಸಿದೆ. ನಗರದ ಮಧ್ಯಭಾಗದಲ್ಲಿರುವ 4-5 ಕೊಳಚೆ ಪ್ರದೇಶದಲ್ಲಿ ಕಳೆದ ಹತ್ತಾರು ವರ್ಷದಿಂದ ವಾಸಿಸುತ್ತಿದ್ದ ಕೊಳಚೆ ಪ್ರದೇಶದ ನಿವಾಸಿಗಳಿಗೆ ನಗರಸಭೆಯಿಂದ ಹಕ್ಕುಪತ್ರ ದೊರೆಯದ ಕಾರಣ ಕೆಲವು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಬದುಕಿಗೆ ಹೊಸ ಭರವಸೆ ಮೂಡಿಸಬೇಕು ಎಂಬ ಸಂಕಲ್ಪದೊಂದಿಗೆ ತಾವು ನಡೆಸಿದ ಹೋರಾಟಕ್ಕೆ ಫಲ ದೊರೆತಿದೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

ನಗರದ ಇಂದಿರಾ ನಗರದಲ್ಲಿ ಅನೇಕ ವರ್ಷಗಳಿಂದ ಕೊಳಗೇರಿಯಲ್ಲಿ ವಾಸಿಸುತ್ತಿದ್ದ ಬಡಜನರಿಗೆ ಮನೆ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿಗಳ ಸರ್ವರಿಗೂ ಸೂರು ಯೋಜನೆ ಅಡಿ 358 ಚದರ ಅಡಿ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿ 61 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಇದೇ ಮಾದರಿಯಲ್ಲಿ ಕೊಳೆಗೇರಿಯಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ಮನೆ ನಿರ್ಮಿಸಿಕೊಳ್ಳಲು ಇಚ್ಚಿಸಿದರೆ ಉತ್ತಮವಾಗಿ ಮನೆ ನಿರ್ಮಿಸಿಕೊಡಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯ ಎಂ. ಸಮೀವುಲ್ಲಾ ಮಾತನಾಡಿ, ಕಳೆದ 50 ವರ್ಷಗಳಿಂದ ಕೊಳಗೇರಿಯಲ್ಲಿ ಜೀವನ ಸಾಗಿಸುತ್ತಾ ಬಂದ ಬಡಾವಣೆಗಳ ವಾಸಿಗಳು ತಾವು ವಾಸಿಸುತ್ತಿದ್ದ ಸ್ಥಳಕ್ಕೆ ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದರು. ಸರ್ಕಾರಗಳು ಬದಲಾದಂತೆ ಸ್ಥಳೀಯ ಜನಪ್ರತಿನಿಧಿಗಳು ಬದಲಾದರೆ ವಿನಹ ಇವರ ಹೋರಾಟಕ್ಕೆ ಸ್ಪಂದಿಸಲಿಲ್ಲ. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿದ ಶಾಸಕ ಶಿವಲಿಂಗೇಗೌಡರು ತಾವು ಕೊಟ್ಟ ಮಾತಿನಂತೆ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುವ ಜತೆಗೆ ಸೂರು ಕಲ್ಪಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 300 ಫಲಾನುಭವಿಗಳನ್ನು ಮೊದಲನೇ ಹಂತದಲ್ಲಿ ಗುರುತಿಸಲಾಗಿದೆ. 15 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವ ಕಾಮಗಾರಿಗೆ ಚಾಲನೆ ದೊರೆತಿರುವುದು ನಗರದಲ್ಲೊಂದು ಸೂರು ನಿರ್ಮಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಕೊಳಗೇರಿ ನಿವಾಸಿಗಳ ಕನಸು ಕೊನೆಗೆ ಶಾಸಕ ಶಿವಲಿಂಗೇಗೌಡರ ವಿಶೇಷ ಆಸಕ್ತಿ ಹಾಗೂ ಹೋರಾಟದ ಫಲದಿಂದಾಗಿ ಸಹಕಾರಗೊಂಡಿದ್ದು ಫಲಾನುಭವಿಗಳು ಹರ್ಷ ವ್ಯಕ್ತಪಡಿಸಿದರು ಎಂದರು.

ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯು ನಗರದ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳು ಎಂದು ಘೋಷಣೆ ಮಾಡಲಾಗಿದ್ದ ಬಾಬಾ ಸಾಹೇಬ್ ಕಾಲೋನಿ, ಹಾಸನ ರಸ್ತೆ ಬಲಭಾಗ ಮತ್ತು ಎಡಭಾಗದ ಕೊಳಚೆ ಪ್ರದೇಶ ಸೇರಿದಂತೆ ಇಂದಿರಾನಗರ ಸರಸ್ವತಿಪುರಂ ಬಡವಾಣೆಗಳಲ್ಲಿ ಕಳೆದ ಐದು ದಶಕಗಳಿಂದ ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ಸೂಕ್ತ ದಾಖಲಾತಿ ಇಲ್ಲದ ಕಾರಣ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದೆ ಶಾಪಗ್ರಸ್ಥ ಎಂಬಂತೆ ದಿನ ದೂಡುತ್ತಿದ್ದರು. ಮನೆ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದರಿಂದ ಕೊಳಗೇರಿ ನಿವಾಸಿಗಳ ಮುಖದಲ್ಲಿ ಮಂದಹಾಸ ಮೂಡಿತು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಪರಮೇಶ್ವರಪ್ಪ, ಸದಸ್ಯರಾದ ವಿದ್ಯಾದರ್, ದರ್ಶನ್, ರಾಜಶೇಖರ್, ಅಬ್ದುಲ್ ಜಮೀರ್, ಯೂನಸ್ ಜಾಕಿರ್ ಹುಸೇನ್ ಸಿಕಂದರ್, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಅಭಿಯಂತರ ಮಹದೇವ್, ಪುರಸಭೆ ಮಾಜಿ ಸದಸ್ಯ ಕಂಠಿ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment