ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ತುಮಕೂರು, ನ. ೮- ರಾಯಚೂರಿನ ಶಿಕ್ಷಕ ಸುಧೀಂದ್ರ ಮುತಾಲಿಕ್ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನ ನ್ಯಾಚ್ಯುರಲ್ ಹೋಮ್ ಹೋಟೆಲ್ ಮಾಲೀಕ ಬಸನಗೌಡ, ಬೆಂಗಳೂರಿನ ರಾಜಾಜಿನಗರ ಕ್ರೈಂ ಪೋಕಸ್ ನ್ಯೂಸ್ ಪತ್ರಕರ್ತೆ ತೇಜೇಶ್ವರಿ ಇಂಗಳಗಿ, ಅಂಜನಾನಗರದ ವೀಡಿಯೋ ಗ್ರಾಫರ್ ಪ್ರಕಾಶ್‌ಕುಮಾರ್, ಕಾಮಾಕ್ಷಿಪಾಳ್ಯದ ಕಾರು ಚಾಲಕ ಜೆ. ಅಶೋಕ್ ಎಂಬುವರೇ ಬಂಧಿತ ಆರೋಪಿಗಳು.

ಶಿಕ್ಷಕ ಸುಧೀಂದ್ರ ಮುತಾಲಿಕ್ ಎಂಬುವರನ್ನು ಸದರಿ ಆರೋಪಿಗಳು ಕೊಲೆ ಮಾಡಿ ಕುಣಿಗಲ್ ತಾಲ್ಲೂಕಿನ ಬಿದನಗೆರೆ ಬಳಿಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಪಕ್ಕ ತಂದು ಎಸೆದಿದ್ದರು.
ಬಂಧಿತ ಆರೋಪಿಗಳಿಂದ 800 ರೂ. ನಗದು, ಮೊಬೈಲ್, ಆಧಾರ್ ಕಾರ್ಡ್, ಬಸ್ ಬುಕ್ಕಿಂಗ್ ಟಿಕೆಟ್, ರೈಲ್ವೆ ಟಿಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ
ಶಿಕ್ಷಕ ಸುಧೀಂದ್ರ ಮುತಾಲಿಕ್ ಪತ್ನಿಗೂ ಹಾಗೂ ಆರೋಪಿ ಬಸನಗೌಡನ ನಡುವೆ ಇದ್ದ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸುಧೀಂದ್ರ ಹಾಗೂ ಅವರ ಪತ್ನಿ ಅಂಬಿಕಾ ನಡುವೆ ಕೌಟುಂಬಿಕ ಕಲಹ ಹೆಚ್ಚಾಗಿತ್ತು. ಇದರಿಂದ ಇಬ್ಬರು ವಿಚ್ಚೇದನ ಪಡೆದಿದ್ದರು. ಸುಧೀಂದ್ರನ ಸ್ನೇಹಿತನಾಗಿದ್ದ ಆರೋಪಿ ಬಸನಗೌಡ, ಅಂಬಿಕಾ ಅವರನ್ನು ಮದುವೆಯಾಗಲು ಯತ್ನಿಸಿದ್ದು, ಇದಕ್ಕೆ ಸುಧೀಂದ್ರ ಅಡ್ಡಿಯಾಗುತ್ತಿದ್ದಾರೆ ಎಂಬ ಸುಳಿವು ತಿಳಿದು ಕೊಲೆ ಸಂಚು ಮಾಡಿದ್ದರು. ಆರೋಪಿ ಬಸನಗೌಡ, ತೇಜೇಶ್ವರಿ ಮೂಲಕ ಪ್ರಕಾಶ್‌ಕುಮಾರ್ ಮತ್ತು ಅಶೋಕ್‌ಗೆ 5 ಲಕ್ಷ ರೂ.ಗಳ ಸುಪಾರಿ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡಿವೈಎಸ್ಪಿ ರಾಮಲಿಂಗೇಗೌಡ ಅವರ ನೇತೃತ್ವದಲ್ಲಿ ಸಿಪಿಐ ಎ.ಎನ್. ಅಶೋಕ್‌ಕುಮಾರ್, ಸಬ್‌ಇನ್ಸ್‌ಪೆಕ್ಟರ್ ಅನಿಲ್‌‌ಕುಮಾರ್, ಪುಟ್ಟೇಗೌಡ, ಕುಣಿಗಲ್ ಠಾಣೆಯ ಸಿಬ್ಬಂದಿ ಪುಟ್ಟರಾಮು, ಪರಮೇಶ್ವರ್ ಸಿದ್ದರಾಜು, ದಯಾನಂದ್, ನಿಂಗರಾಜು, ರಂಗೇಗೌಡ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದಾರೆ.

Leave a Comment