ಕೊಲೆ ಪ್ರಕರಣ: ಚುರುಕುಗೊಂಡ ತನಿಖೆ

ಕೊರಟಗೆರೆ, ಜ. ೧೨- ಮಾಲೀಕನ ಮಗಳನ್ನು ಪ್ರೀತಿಸಿ ಮನೆಯಿಂದ ಕಾಣೆಯಾಗಿ ನಂತರ ಮದುವೆಯಾದ ಕಾರು ಚಾಲಕ ಮನುವಿನ ಬರ್ಬರ ಹತ್ಯೆ ನಡೆದಿರುವ ಸ್ಥಳಕ್ಕೆ ತುಮಕೂರು ಪೊಲೀಸ್ ಅಧೀಕ್ಷಕ ಡಾ. ಕೋನವಂಶಿಕೃಷ್ಣ ಭೇಟಿ ನೀಡಿ ಕೊಲೆಯಾದ ಸ್ಥಳವನ್ನು ಪರಿಶೀಲನೆ ನಡೆಸುವ ಮೂಲಕ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರಾಜ್ಯ ಹೆದ್ದಾರಿಯಿಂದ ರೈತ ಸೂಲಪ್ಪ ಮತ್ತು ತಿಮ್ಮಪ್ಪನ ಜಮೀನಿನ ಮೂಲಕ ಕಲ್ಲುಗಣಿಗಾರಿಕೆ ನಡೆಯುವ ಮಾರ್ಗ ಮಧ್ಯೆಯ ರಸ್ತೆಯಲ್ಲಿ ಮನು ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಕೊಲೆಯ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದರು.

ತುಮಕೂರು ಜಿಲ್ಲೆಗೆ ನೂತನವಾಗಿ ಆಗಮಿಸಿ ಅಧಿಕಾರ ಸ್ವೀಕರಿಸಿದ ಮಾರನೇಯ ದಿನವೇ ಕೊರಟಗೆರೆ ತಾಲ್ಲೂಕಿಗೆ ಪ್ರಥಮ ಬಾರಿಗೆ ಆಗಮಿಸಿದ ಪೊಲೀಸ್ ಅಧೀಕ್ಷಕರು ಮನುವಿನ ಕೊಲೆಗೆ ಬಳಸಲಾಗಿದ್ದ ಲಾಂಗು ಮತ್ತು ಚಾಕು ದೊರೆತ ಸ್ಥಳವನ್ನು ಸಹ ಪರಿಶೀಲನೆ ನಡೆಸಿದ್ದಾರೆ. ಮನುವಿನ ಕೊಲೆಯ ಹಿಂದಿರುವ ಉದ್ದೇಶವನ್ನು ಪತ್ತೆ ಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕೊಲೆ ಮಾಡಿರುವ ಆರೋಪಿಗಳ ಬಗ್ಗೆ ಮಾಹಿತಿ ನೀಡುವಂತೆ ಪತ್ರಕರ್ತರು ತುಮಕೂರು ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದಾಗ ಕೊಲೆಯ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ. ಮನುವಿನ ಕೊಲೆಯ ತನಿಖೆ ಪೂರ್ಣಗೊಂಡ ನಂತರ ಕೊಲೆ ಮಾಡಿದ ಆರೋಪಿಗಳ ಸಂಪೂರ್ಣ ವಿವರ ಮತ್ತು ಅವರ ಉದ್ದೇಶದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ಮನುವಿನ ಬರ್ಬರ ಕೊಲೆಯಾಗಿ ಇಂದಿಗೂ ನಾಲ್ಕು ದಿನ ಪೂರ್ಣಗೊಂಡಿದೆ. ಕೊಲೆಯಾದ ಕೇವಲ 12 ಗಂಟೆಯೊಳಗೆ 8 ಜನ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

ಮನು ಕೊಲೆಯಾದ ಬಳಿಕ ಆತನ ಪ್ರೇಯಸಿಯು ಸಹ ಕಾಣೆಯಾಗಿದ್ದಾಳೆ. ಮನುವಿನ ಪ್ರಕರಣಕ್ಕೆ ಆತನ ಹೆಂಡತಿಯ ಹೇಳಿಕೆಯು ಸಹ ಹೆಚ್ಚಿನ ಸಾಕ್ಷಿ ನೀಡಲಿದ್ದು, ಆಕೆಗಾಗಿ ಪೊಲೀಸರು ಹುಡುಕಾಟ ಪ್ರಾರಂಭ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ತುಮಕೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಮಧುಗಿರಿ ಡಿವೈಎಸ್ಪಿ ಧರಣೀಶ್, ಕೊರಟಗೆರೆ ಸಿಪಿಐ ನದಾಫ್, ಪಿಎಸೈ ಮಂಜುನಾಥ, ಪೇದೆಗಳಾದ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment