ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ತುಮಕೂರು, ಅ. ೧೨- ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಚಾಕುವಿನಿಂದ ಆತನ ಕೊರಳನ್ನು ಕೊಯ್ದು ಕೊಲೆ ಮಾಡಿದ್ದ ಆರೋಪಿನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಸಿರಾ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬಾಲಾಜಿ ಹೋಟೆಲ್ ಕಟ್ಟಡದ ಪಕ್ಕದಲ್ಲಿ ಜಬೀಉಲ್ಲಾ ಕುಳಿತಿದ್ದ ವೇಳೆ ಸದ್ದಾಂಹುಸೇನ್ ಅಲ್ಲಿಗೆ ಬಂದು ನಾನಿಲ್ಲಿ ಮದ್ಯಪಾನ ಮಾಡಬೇಕು, ಆಚೆ ಹೋಗು ಎಂದು ತಾಕೀತು ಮಾಡಿದ್ದಾನೆ. ಜಬೀಉಲ್ಲಾ ಆಚೆಗೆ ಹೋಗದ ಕಾರಣ ಕುಪಿತನಾದ ಸದ್ದಾಂಹುಸೇನ್ ಜಬೀಉಲ್ಲಾನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಚಾಕುವಿನಿಂದ ಕೊರಳು ಕೊಯ್ದು ಕೊಲೆ ಮಾಡಿದ್ದನು.

ಈ ಬಗ್ಗೆ ಸಿರಾ ಪೊಲೀಸ್ ಠಾಣೆಯಲ್ಲಿ ಆರೋಪಿ ಸದ್ದಾಂಹುಸೇನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತುಮಕೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುದ್ದಾಹುಸೇನ್‌ಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ತೀರ್ಪು ನೀಡಿದ್ದಾರೆ.

ದಂಡದ 1 ಲಕ್ಷ ಹಣದಲ್ಲಿ 85 ಸಾವಿರ ರೂ.ಗಳನ್ನು ಜಬೀಉಲ್ಲಾನ ಪತ್ನಿ ಜಬೀನಾಭಾನು ಅವರಿಗೆ ನೀಡುವಂತೆ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ ಕೆ.ಎಚ್. ಶ್ರೀಮತಿ ವಾದ ಮಂಡಿಸಿದ್ದರು.

Leave a Comment