ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಕಲಬುರಗಿ,ಫೆ.12-ಫರತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಳಗಿ ಗ್ರಾಮದ ಸೀಮಾಂತರದ ಹೊಲದಲ್ಲಿ ಚಂದ್ರಕಾಂತ ಹಾಗೂ ಇತರರು ತೊಗರಿ ಖಣ ಮಾಡುತ್ತಿದ್ದಾಗ ಹಳೆ ವೈಷಮ್ಯ ಹಾಗೂ ಎಸ್.ಡಿ.ಎಂ.ಸಿ ಚುನಾವಣೆಯ ಹಿನ್ನೆಲೆಯಲ್ಲಿ ಅಕ್ರಮ ಕೂಟ ರಚಿಸಿಕೊಂಡು ಅವರ ಮೇಲೆ ಕುಡಗೋಲ ಮತ್ತು ಬಡಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿಗಳಿಗೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

7.1.2018 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ರೇವಣಸಿದ್ದಪ್ಪ, ಮಹಾದೇವಪ್ಪ, ಈಶ್ವರಾಧ್ಯ ಅಲಿಯಾಸ್ ಈಶ್ವರಾಜ ಮತ್ತು ಜಗದೇವಪ್ಪ ಅವರು ಕೂಡಿಕೊಂಡು ಚಂದ್ರಕಾಂತ ಅವರ ಹೊಲಕ್ಕೆ ಹೋಗಿ ಅವರು ತೊಗರಿ ಖಣ ಮಾಡುತ್ತಿದ್ದಾಗ ಅವರ ಮೇಲೆ ಕುಡಗೋಲ ಮತ್ತು ಬಡಿಗೆಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಕಾಂತ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದರು. ಈ ಸಂಬಂಧ ಫರತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂ.ಬಿ.ನಗರ ಪೊಲೀಸ್ ಠಾಣೆ ಸಿಪಿಐ ಶಾಂತಿನಾಥ ಬಿ.ಪಿ.ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶುಕಲಾಕ್ಷ ಪಾಲನ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಕಾನೂನು ಅಧಿಕಾರಿ (ಹಿರಿಯ) ಹಾಗೂ ಪ್ರಭಾರೆ 1ನೇ ಅಪರ ಸರ್ಕಾರಿ ಅಭಿಯೋಜಕ ಎಸ್.ಎ.ಪಾಸ್ತೆ ವಾದ ಮಂಡಿಸಿದ್ದರು.

Leave a Comment