ಕೊರೋನಾ ಸೋಂಕು ಹರಡದಂತೆ ಬನ್ನೇರುಘಟ್ಟದಲ್ಲಿ ಕ್ರಮ

ಬೆಂಗಳೂರು, ಮೇ 8 – ಅಮೆರಿಕದಲ್ಲಿ ಹುಲಿಗೆ ಕೊರೋನಾ ಸೋಂಕು ದೃಢಪಟ್ಟ ಬಳಿಕ ಜಗತ್ತಿನ ಬಹುತೇಕ ಪ್ರಾಣಿ ಸಂಗ್ರಹಾಲಯಗಳಲ್ಲಿ ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಬನ್ನೇರುಘಟ್ಟ ಸೋಂಕು ನುಸುಳದಂತೆ ಸರ್ಪಗಾವಲು ಹಾಕಲಾಗಿದೆ.

ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನವನದಲ್ಲಿ ಕೊರೊನಾ ವೈರಸ್ ಸೋಂಕು ಪ್ರಾಣಿಗಳಿಗೆ ಹರಡದಂತೆ ಎಲ್ಲಾ ಹಂತಗಳಲ್ಲೂ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉದ್ಯಾನವನದಲ್ಲಿರುವ ಪ್ರಾಣಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳುತ್ತಿದ್ದು, ಪ್ರಾಣಿಗಳನ್ನು ಮುಟ್ಟದಂತೆ ವನ್ಯಜೀವಿ ಪಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಉದ್ಯಾನವನದಲ್ಲಿ ಎಲ್ಲಾ ಹಂತಗಳಲ್ಲೂ ನಿಗಾವಹಿಸಲಾಗಿದೆ. ಉದ್ಯಾನವನಕ್ಕೆ ತೆರಳುವ ಮುನ್ನ ಸಂಪೂರ್ಣ ಸ್ಯಾನಿಟೈಸ್‌ಗೆ ಒಳಪಡಬೇಕು. ವೈಯಕ್ತಿಕ ಶುಚಿತ್ವಕ್ಕೆ ಒತ್ತು ನೀಡಬೇಕು. ಪ್ರಾಣಿಗಳ ಆರೈಕೆ, ಪಾಲನೆ, ಚಿಕಿತ್ಸೆ ಸೇರಿದಂತೆ ಎಲ್ಲಾ ಹಂತಗಳಲ್ಲಿ ಕಟ್ಟೆಚ್ಚರ ಅಗತ್ಯ ಎಂದು ಸಿಬ್ಬಂದಿಗೆ ಪದೇ ಪದೇ ಸೂಚನೆ ನೀಡಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎಸ್.ಉಮಾಶಂಕರ್ ಸ್ಪಷ್ಟಪಡಿಸಿದ್ದಾರೆ.

ಉದ್ಯಾನವನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಕುಟುಂಬದಲ್ಲಿ ಯಾರಿಗಾದರೂ ಕೆಮ್ಮು, ನೆಗಡಿ, ಜ್ವರ ಮತ್ತಿತರ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಗಮನಕ್ಕೆ ತರುವಂತೆ ಸೂಚಿಸಿದ್ದು, ಮನೆಗಳಿಂದ ಪ್ರಾಣಿಗಳಿಗೆ ಸೋಂಕು ವ್ಯಾಪಿಸಬಾರದು ಎನ್ನುವ ಕಾರಣದಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Leave a Comment