ಕೊರೋನಾ ವೈರಾಣು; ವಿವಿಗೆ ಮರಳದಂತೆ ರಜೆ ಮೇಲೆ ತೆರಳಿರುವ 18 ವಿದ್ಯಾರ್ಥಿಗಳಿಗೆ ಸೂಚನೆ

ಮೈಸೂರು, ಫೆ 11 – ಕೊರೋನಾ ವೈರಾಣು ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ತಮ್ಮ ರಜಾದಿನಗಳನ್ನು ಕಳೆಯಲು ತವರಿಗೆ ಮರಳಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದ 18 ಚೀನಾ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಮರಳದಂತೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವರೆಗೂ ಚೀನಾದಿಂದ ಮರಳದಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿದೆ ಎಂದು ಮೈಸೂರು ವಿವಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದೆ.

ಮೈಸೂರು ವಿವಿಯ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ 120 ಚೀನಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಢುತ್ತಿದ್ದಾರೆ. ಇವರಲ್ಲಿ 18 ವಿದ್ಯಾರ್ಥಿಗಳು ರಜೆ ಕಳೆಯಲು ಚೀನಾದ ವುಹಾನ್ ನಗರಕ್ಕೆ ತೆರಳಿದ್ದರು. ಅವರಿಗೆ ತಕ್ಷಣ ಮರಳದಂತೆ ಸಂದೇಶ ನೀಡಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಇತ್ತೀಚಿಗೆ ವಿವಿ ರಿಜಿಸ್ಟ್ರಾರ್ ಶಿವಪ್ಪ ಅವರ ಕಚೇರಿಗೆ ಭೇಟಿ ನೀಡಿ ಚೀನಿ ವಿದ್ಯಾರ್ಥಿಗಳ ಆರೋಗ್ಯದ ಸ್ಥಿತಿಗತಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನ ಅಂತಾರಾಷ್ಟ್ರೀಯ ಅತಿಥಿ ಗೃಹದಲ್ಲಿ ನೆಲೆಸಿರುವ ಚೀನಿ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕೆಆರ್ ರಸ್ತೆಯಲ್ಲಿನ ಆಸ್ಪತ್ರೆಯಲ್ಲಿ ಐದು ತುರ್ತು ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಗ್ಯಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

ಕೊರೋನಾ ವೈರಾಣು ಸೋಂಕು ತಡೆಗೆ ತರಬೇತಿ, ಕಣ್ಗಾವಲು, ತಪಾಸಣೆ ಮತ್ತು ಚಿಕಿತ್ಸೆಗಾಗಿ ನಾಲ್ಕು ಸಮಿತಿಗಳನ್ನು ರಚಿಸಲಾಗಿದೆ.

ರಕ್ಷಣಾ ಮಾಸ್ಕ್ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ರೋಗ ನಿಯಂತ್ರಕ ಅಧಿಕಾರಿ ಚಿದಂಬರ್, ಪ್ರತ್ಯೇಕ ತಪಾಸಣೆಯಲ್ಲಿರುವ ರೋಗಿಗಳಿಗೆ ತಪಾಸಣೆ ನೀಡುವಾಗಿ ಸಾಮಾನ್ಯವಾಗಿ ವೈದ್ಯರು ಮತ್ತು ನರ್ಸ್ ಗಳಿಗೆ ಮೂರು ಪದರದ ಮಾಸ್ಕ್ ಗಳನ್ನು ಬಳಸುವಂತೆ ಸಲಹೆ ನೀಡಲಾಗುತ್ತದೆ. ಸಾರ್ವಜನಿಕರು ಸಾಮಾನ್ಯ ಮಾಸ್ಕ್ ಗಳನ್ನು ಬಳಸಬಹುದು. ಜೊತೆಗೆ, ಕೆಮ್ಮು, ಸೀನು ಇರುವ ವ್ಯಕ್ತಿಯೊಂದಿಗೆ ಅಂತರ ಕಾಯ್ದುಕೊಳ್ಳುವುದು ಮತ್ತು ಸೀನುವಾಗ ಕರವಸ್ತ್ರ ಬಳಸುವುದು ಉತ್ತಮ ಎಂದಿದ್ದಾರೆ.

Leave a Comment