ಕೊರೋನಾ ಮುಕ್ತ ಹೆಗ್ಗಳಿಕೆಗೆ ಗಡಿ ಜಿಲ್ಲೆ

ರಾಜ್ಯದ ಕೊರೋನಾ ಕಪ್ ಗೆದ್ದ ಚಾಮರಾಜನಗರ
ಚಾಮರಾಜನಗರ. ಮೇ.26:- ಕೊರೋನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಹಸಿರಿನಿಂದ ಕಂಗೊಳಿಸುವ ಗಡಿ ಜಿಲ್ಲೆ ಚಾಮರಾಜನಗರ ಮಾತ್ರ ಉಳಿದುಕೊಂಡಿದ್ದು ರಾಜ್ಯದ ಕೊರೋನಾ ಮುಕ್ತ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊರೋನಾ ಸೋಂಕು ಇರುವ ತಮಿಳುನಾಡು, ಕೇರಳ ಮತ್ತು ನಮ್ಮ ರಾಜ್ಯದ ಮೈಸೂರು, ಮಂಡ್ಯ ಜಿಲ್ಲೆಯ ಗಡಿಗಳನ್ನು ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ ಕಳೆದ 60 ದಿನಗಳಲ್ಲಿ ಜಿಲ್ಲೆಯಲ್ಲಿ ಒಂದೇ ಒಂದೂ ಪ್ರಕರಣ ದಾಖಲಾಗದೇ ಹಸಿರು ವಲಯದಲ್ಲೇ ಮುಂದುವರೆದು ರಾಜ್ಯಕ್ಕೆ ಮಾದರಿಯಾಗಿದೆ.
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ, ಅಧಿಕಾರಿ ವರ್ಗದ ಶ್ರಮ, ಜಿಲ್ಲೆಯ ಜನತೆಯ ಸಹಕಾರ ಹಸಿರು ವಲಯವಾಗಲು ಕಾರಣವಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ‌. ಹಿಂದುಳಿದ ಜಿಲ್ಲೆ, ನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಗೆ ತುತ್ತಾಗಿದ್ದ ಗಡಿಜಿಲ್ಲೆ ಕೊರೋನಾ ವಿಚಾರದಲ್ಲಿ ಮಾದರಿ ಜಿಲ್ಲೆಯಾಗಿ ಗುರುತಿಸಿಕೊಂಡಿದೆ.
ಕೊರೋನಾ ಹರಡದಂತೆ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಹಸಿರು ವಲಯ ಕಾಪಾಡಲು ಹತ್ತಾರು ಕ್ರಮ ಕೈಗೊಂಡಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಎವರ್ ಗ್ರೀನ್ ಚಾಮರಾಜನಗರ ಎಂಬ ಅಭಿಯಾನ ಆರಂಭಿಸಿ, ಜಿಲ್ಲೆಯ ಜನತೆ ಈ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಪ್ರತಿಯೊಬ್ಬರು ಕೊರೊನಾ ವಾರಿಯರ್ಸ್ ಆಗಬೇಕು ಎಂದು ಮನವಿ ಮಾಡಿದ್ದರು. ಇದೀಗ ಇದು ಮೈಮರೆಯುವ ಸಮಯವಲ್ಲ, ಸಾಮಾಜಿಕ ಜವಾಬ್ದಾರಿಯನ್ನು ಜಾಗರೂಕತೆಯಿಂದ ಪ್ರದರ್ಶನ ಮಾಡಿ, ನಮ್ಮ ಜಿಲ್ಲೆಯನ್ನು ಹಸಿರು ವಲಯದಲ್ಲಿ ಉಳಿಸಿಕೊಳ್ಳಲು ಸಮಸ್ತ ಜನರು ಸಹಕಾರ ನೀಡಬೇಕು ಎಂದು ತಮ್ಮ ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದಾರೆ.
ಚಾಮರಾಜನಗರಕ್ಕೆ ಕೊರೋನಾ ಕಪ್
ರಾಮನಗರ ಜಿಲ್ಲೆಗೆ ಕೊರೋನಾ ವಕ್ಕರಿಸುತ್ತಿದ್ದಂತೆ ಇತ್ತ ಚಾಮರಾಜನಗರ ಕೊರೋನಾಮುಕ್ತ ಏಕೈಕ ಜಿಲ್ಲೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಭರಿತ ಸಂದೇಶಗಳು ಹರಿದಾಡತೊಡಗಿವೆ. ಕೊರೋನಾ ಹರಡದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
“ದೇಶಕ್ಕೆ ಕೇರಳ ಮಾದರಿ ರಾಜ್ಯಕ್ಕೆ ಚಾಮರಾಜನಗರ ಮಾದರಿ”, “ಕೊರೋನಾ ಕಪ್ ಗೆದ್ದ ಚಾಮರಾಜನಗರ”, “ರಾಮನಗರ ವರ್ಸಸ್ ಚಾಮರಾಜನಗರ”, “ಈ ಸಲ ಕಪ್ ನಮ್ದೆ”, “ಸಿಎಂ, ಸಚಿವರು, ರಾಜಕಾರಣಿಗಳು ಮಾತ್ರವಲ್ಲ, ಕೊರೋನಾಗೂ ಚಾಮರಾಜನಗರಕ್ಕೆ ಎಂಟ್ರಿ ಕೊಡಲು ಭಯ”, “ಕೊರೋನಾದಲ್ಲೂ ಶಾಪಗ್ರಸ್ಥ ಜಿಲ್ಲೆಯಾಗಿ ಉಳಿದ ಚಾಮರಾಜನಗರ” ಎಂಬಿತ್ಯಾದಿ ಸಂದೇಶಗಳು ಸಖತ್ ಟ್ರೋಲ್ ಆಗಿವೆ.
ಹಸಿರು ವಲಯದಲ್ಲಿದ್ದ ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ಪತ್ತೆಯಾದಾಗ ಚಿಕ್ಕಮಗಳೂರು ರನ್ ಔಟ್, ಫೈನಲ್ ಗೆ ಚಾಮರಾಜನಗರ-ರಾಮನಗರ, ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿತ್ತು, ಇದೀಗ ರಾಮನಗರದಲ್ಲಿ ಕೊರೋನಾ ಸೋಂಕು ದೃಢಪಡುತ್ತಿದ್ದಂತೆ ಕೊರೋನಾ ಕಪ್ ಫೈನಲ್ ನಲ್ಲಿ ಸೋಲೊಪ್ಪಿದ ರಾಮನಗರ, ರೋಚಕ 20-20 ಹೋರಾಟದಲ್ಲಿ ಅಂತಿಮವಾಗಿ ಚಾಮರಾಜನಗರ ಜಯಗಳಿಸಿದೆ.

Share

Leave a Comment