ಕೊರೋನಾ;;ಮುನ್ನೆಚ್ಚರಿಕೆ ಕ್ರಮಗಳು

ಚೀನಾ ದೇಶದ ವುಹಾನ್ ಎಂಬ ನಗರದಿಂದ ಪ್ರಾರಂಭವಾಗಿ ಈಗ ಜಗತ್ತಿನೆಲ್ಲೆಡೆ ಹಬ್ಬುತ್ತಿರುವ ಕೊರೋನಾ ವೈರಸ್ ನ ಒಂದು ಪ್ರಬೇಧವಾದ ಕೋವಿಡ್-೧೯ ಆತಂಕ ಹೆಚ್ಚಿಸಿದೆ.
ದಿನದಿಂದ ದಿನಕ್ಕೆ ಈ ಸೋಂಕಿಗೆ ಒಳಗಾದವರು ಮರಣವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಸಾಂಕ್ರಾಮಿಕ ಹರಡುವಿಕೆಯನ್ನು ನಿಯಂತ್ರಿಸದೇ ಇದ್ದಲ್ಲಿ ಇದು ವಿಶ್ವವ್ಯಾಪಿ ಪಿಡುಗು ಆಗುವುದರಲ್ಲಿ ಸಂಶಯವಿಲ್ಲ.
ಕೊರೋನಾ ವೈರಸ್ ಎಂಬುದು ಜೂನಾಟಿಕ್ ಬಗೆಯ ಪರಾವಲಂಬಿ ಕ್ರಿಮಿಯಾಗಿದೆ. ಅಂದರೆ ಇದು ಪ್ರಾಣಿಯ ದೇಹದಲ್ಲಿ ಆಶ್ರಯ ಪಡೆದು ಮಾಧ್ಯಮವೊಂದರ ಮೂಲಕ (ರಕ್ತ, ಗಾಳಿ, ನೀರು ಇತ್ಯಾದಿ) ಮನುಷ್ಯರ ದೇಹ ಪ್ರವೇಶಿಸಿ ತನ್ನ ವಂಶಾಭಿವೃದ್ದಿಗೊಳಿಸಿ ಸೋಂಕು ಹರಡುತ್ತದೆ.

ಕರ್ನಾಟಕದ ಮಂಗನ ಕಾಯಿಲೆ ಎಂಬುದು ಇದೇ ತರಹದ ಸೋಂಕುಕಾರಕ ರೋಗವಾಗಿದೆ. ವೈರಸ್ ಮನುಷ್ಯರ ದೇಹವನ್ನು ಪ್ರವೇಶಿಸಿದ ತಕ್ಷಣವೇ ಇದರ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಪೂರ್ಣಪ್ರಮಾಣದಲ್ಲಿ ವಂಶಾಭಿವೃದ್ದಿಗೊಂಡ ಬಳಿಕವೇ ಇವು ತಮ್ಮ ಮನೆಹಾಳು ಕೆಲಸ ಮಾಡುವುದರಿಂದ ಸುಮಾರು ಹದಿನಾಲ್ಕು ದಿನಗಳ ಬಳಿಕವೇ ಇದರ ಲಕ್ಷಣಗಳು ಗೋಚರಿಸಲು ತೊಡಗುತ್ತವೆ.

ಇದರಲ್ಲಿ ಪ್ರಮುಖವಾದವು ಎಂದರೆ ಸಾಮಾನ್ಯ ಜ್ವರ, ಕೆಮ್ಮು, ಸೋರುವ ಮೂಗು, ಗಂಟಲ ಬೇನೆ, ಜ್ವರ, ತಲೆನೋವು, ಸೀನುವಿಕೆ ಮತ್ತು ಬಳಲಿಕೆ. ಉಲ್ಬಣಗೊಂಡ ಸ್ಥಿತಿಯ ಲಕ್ಷಣಗಳೆಂದರೆ ನ್ಯುಮೋನಿಯಾ, ಅತೀವವಾದ ಶ್ವಾಸ ಸಂಬಂಧಿ ತೊಂದರೆಗಳು, ಅತಿಸಾರ ಮತ್ತು ಅಂತಿಮವಾಗಿ ಸಾವು ಸಹಾ ಎದುರಾಗಬಹುದು.
ಕೊರೋನಾ ವೈರಸ್ ಇತರ ಯಾವುದೇ ವೈರಸ್ ಸೋಂಕಿಗಿಂತಲೂ ಭೀತಿ ಹುಟ್ಟಿಸಿದೆ ಎಂದರೆ ಇದು ಹರಡುವ ವೇಗ ಮತ್ತು ಆವರಿಸಿಕೊಳ್ಳುವ ಕ್ಷಮತೆ ತಕ್ಷಣವೇ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುತ್ತಿವೆ.
“ವಿಶ್ವ ಆರೋಗ್ಯ ಸಂಸ್ಥೆ” ಬಿಡುಗಡೆ ಮಾಡಿರುವ ಪ್ರಮುಖ ಹದಿನೈದು ಕ್ರಮಗಳನ್ನು ಇಲ್ಲಿ ವಿವರಿಸಲಾಗಿದ್ದು.

೧. ಅನಾವಶ್ಯಕವಾಗಿ ಪಯಣಿಸದಿರಿ
ಒಂದು ವೇಳೆ ನಿಮಗೆ ಫ್ಲೂ ತರಹದ ಜ್ವರದ ಲಕ್ಷಣಗಳು, ಕೆಮ್ಮು, ಸೋರುತ್ತಿರುವ ಮೂಗು ಅಥವಾ ಸೀನುವಿಕೆ ಎದುರಾದರೆ ಎಲ್ಲಿಯವರೆಗೆ ಪ್ರಯಾಣ ಅತ್ಯವಶ್ಯವಲ್ಲದ ಹೊರತು ಆದಷ್ಟೂ ಪ್ರಯಾಣವನ್ನು ಮಾಡದಿರಿ.

೨. ಜನಜಂಗುಳಿಯಿಂದ ಆದಷ್ಟೂ ದೂರಿವಿರಿ
ಕೊರೋನಾ ವೈರಸ್ ಸೋಂಕು ತಗಲಿರುವ ವ್ಯಕ್ತಿ ಅದರ ಲಕ್ಷಣಗಳನ್ನು ಸ್ಪಷ್ಟವಾಗಿ ಪ್ರಕಟಿಸುವ ಮುನ್ನವೇ ತನ್ನ ಸೀನುವಿಕೆ ಅಥವಾ ನಿಃಶ್ವಾಸದ ಮೂಲಕವೂ ಸೋಂಕು ಹರಡಬಲ್ಲವನಾಗಿರುತ್ತಾರೆ. ಮನುಷ್ಯರ ದೇಹ ಪ್ರವೇಶಿಸಿದ ವೈರಸ್ ವಂಶಾಭಿವೃದ್ದಿಗೊಂಡು ಮುಂದಿನ ಸಂತತಿ ರೋಗಿಯ ಮೇಲೆ ಆಕ್ರಮಣ ಮಾಡಲು ಸುಮಾರು ಹದಿನಾಲ್ಕು ದಿನಗಳು ಬೇಕಾಗುತ್ತವೆ. ಆದರೆ ಈ ಹದಿನಾಲ್ಕು ದಿನಗಳ ಮುನ್ನವೂ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು. ಜನಜಂಗುಳಿಯಲ್ಲಿ ಯಾರಿಗೆ ಸೋಂಕು ಇದೆ ಅಥವಾ ಇಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ಆದಷ್ಟೂ ಜನಜಂಗುಳಿಯಿಂದ ದೂರವಿರಿ.

೩. ವೈದ್ಯಕೀಯ ನೆರವು ಪಡೆಯಿರಿ
ಒಂದು ವೇಳೆ ನೀವು ಇತ್ತೀಚೆಗೆ ಕೊರೋನಾ ವೈರಸ್ ಸೋಂಕು ಖಚಿತಗೊಂಡಿರುವ ದೇಶಕ್ಕೆ ಪಯಣಿಸಿ ಹಿಂದಿರುಗಿದ್ದರೆ ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಗೊಳ್ಳಿ. ಅದರಲ್ಲೂ ಜ್ವರ, ಉಸಿರಾಟಕ್ಕೆ ಕಷ್ಟವಾಗುವುದು ಮೊದಲಾದ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಿರಿ.

೪. ವ್ಯಕ್ತಿಗಳೊಂದಿಗೆ ಮಾತನಾಡುವಾಗ ನಡುವಣ ಅಂತರ ಹೆಚ್ಚಿಸಿ
ಒಂದು ವೇಳೆ ನೀವು ಮಾತನಾಡುತ್ತಿರುವ ವ್ಯಕ್ತಿಗೆ ಜ್ವರ ಅಥವಾ ಸಾಮಾನ್ಯ ಶೀತದ ಲಕ್ಷಣಗಳನ್ನು ತೋರುತ್ತಿದ್ದರೆ ಈ ವ್ಯಕ್ತಿಗಳಿಂದ ಕನಿಷ್ಟ ಅರ್ಧ ಮೀಟರ್ ದೂರವಾದರೂ ಇರಿ. ಸುಮಾರು ಎರಡು ಮೀಟರ್ ದೂರವಿದ್ದರೆ ಹೆಚ್ಚು ಸುರಕ್ಷಿತ. ಈ ಮೂಲಕ ಆ ವ್ಯಕ್ತಿಯಿಂದ ನಿಮಗೆ ಸೋಂಕು ಹರಡುವ ಸಾಧ್ಯತೆಯನ್ನು ಕುಗ್ಗಿಸಬಹುದು.

೫. ಕೈಗಳನ್ನು ಸ್ವಚ್ಚವಾಗಿರಿಸಿ
ನಿಮ್ಮ ಕೈಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ. ಸೋಪು ಅಥವಾ ಅಲ್ಕೋಹಾಲ್ ಹೊಂದಿರುವ ಕೈ ತೊಳೆಯುವ ದ್ರಾವಣದಿಂದ ಕನಿಷ್ಟ ಇಪ್ಪತ್ತು ಸೆಕೆಂಡುಗಳ ಕಾಲವಾದರೂ ತೊಳೆದುಕೊಳ್ಳಬೇಕು.

೬. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ
ನಿಮ್ಮ ವಾಸಸ್ಥಳ ಹಾಗೂ ಕಾರ್ಯಸ್ಥಳದಲ್ಲಿ ಹೆಚ್ಚಿನ ಜನರು ಸ್ಪರ್ಶಿಸುವ ವಸ್ತುಗಳನ್ನು ಉತ್ತಮ ಗುಣಮಟ್ಟದ ಸೋಂಕು ನಿವಾರಕ ದ್ರಾವಣ ಉಪಯೋಗಿಸಿ ಸ್ವಚ್ಛಗೊಳಿಸುತ್ತಾ ಇರಿ. ಉದಾಹರಣೆಗೆ ಬಾಗಿಲ ಹಿಡಿಕೆಗಳು, ಮೆಟ್ಟಿಲು ಏರುವಾಗ ಕೈ ಹಿಡಿಯುವ ಕಟ್ಟೆ, ಮೇಜು, ಶೌಚಾಲಯ, ಕಂಪ್ಯೂಟರ್ ಕೀಬೋರ್ಡ್, ಮೌಸ್, ಲ್ಯಾಪ್ ಟಾಮ್, ಸ್ವಿಚ್ಚುಗಳು, ಹೆಚ್ಚಿನ ಜನರು ಹಂಚಿಕೊಳ್ಳುವ ಕಚೇರಿಯ ಉಪಯೋಗಿ ಸಲಕರಣೆಗಳು ಇತ್ಯಾದಿ.

೭. ಸೋಂಕು ಇರುವ ಕೈಗಳಿಂದ ಕಣ್ಣುಗಳನ್ನು ಮುಟ್ಟದಿರಿ
ಒಂದು ವೇಳೆ ಎದುರಿನ ವ್ಯಕ್ತಿ ಸೀನುವಾಗ ಆತ ಯಾವುದೇ ಮುಖ ಕವಚವನ್ನು ಧರಿಸಿಕೊಳ್ಳದೇ ಇದ್ದರೆ ಮತ್ತು ಆ ವ್ಯಕ್ತಿಗೆ ಸೋಂಕು ಇದ್ದರೆ ಸೋಂಕು ಕಾರಕ ಕ್ರಿಮಿಗಳು ಗಾಳಿಯಲ್ಲಿ ಹರಡಿರುವುದು ಸ್ಪಷ್ಟವಾಗುತ್ತದೆ. ಇವು ಗಾಳಿಯಲ್ಲಿ ತೇಲುತ್ತಿರುವ ಅತಿ ಸೂಕ್ಷ್ಮ ನೀರಿನ ಕಣಗಳಲ್ಲಿ ಆಶ್ರಯ ಪಡೆದಿರುತ್ತವೆ. ನಿಧಾನವಾಗಿ ತೇಲುತ್ತಾ ಸುತ್ತಲ ಎಲ್ಲೆಡೆ ಹರಡುವ ಈ ಕಣಗಳು ಆ ಸ್ಥಳದಲ್ಲಿರುವ ಎಲ್ಲಾ ವಸ್ತುಗಳ ಮೇಲೆ ನಿಧಾನವಾಗಿ ಕುಳಿತುಕೊಳ್ಳುತ್ತವೆ.

ಬೇರೊಬ್ಬ ವ್ಯಕ್ತಿ ಈ ವಸ್ತುಗಳನ್ನು ಸ್ಪರ್ಶಿಸಿ ಬಳಿಕ ಇದೇ ಕೈಗಳಿಂದ ಮೂಗು ಬಾಯಿ ಅಥವಾ ಕಣ್ಣುಗಳನ್ನು ಸ್ಪರ್ಷಿಸಿದರೆ ಕೈಗಳಿಂದ ಈ ವೈರಸ್ಸುಗಳು ಈ ತೇವವಿರುವ ಭಾಗಕ್ಕೆ ಚಕ್ಕನೆ ದಾಟಿಕೊಳ್ಳುತ್ತವೆ. ಒಮ್ಮೆ ತೇವವಿರುವ ಭಾಗಕ್ಕೆ ಇವು ಆಗಮಿಸಿದವೋ ಮುಂದಿನ ಹದಿನಾಲ್ಕು ದಿನಗಳಲ್ಲಿ ಸೋಂಕು ಉಂಟುಮಾಡಲು ಆ ಕ್ಷಣದಿಂದಲೇ ಶ್ರಮಿಸತೊಡಗುತ್ತವೆ. ಗಾಳಿಯಲ್ಲಿ ತೇಲುತ್ತಿರುವ ಮತ್ತು ವಸ್ತುಗಳ ಮೇಲೆ ಕುಳಿತಿರುವ ಈ ಸೂಕ್ಷ್ಮ ನೀರಿನ ಕಣಗಳಲ್ಲಿರುವ ವೈರಸ್ಸುಗಳು ಸುಮಾರು ನಲವತ್ತೆಂಟು ಗಂಟೆಗಳವರೆಗೂ ಜೀವಂತವಿರಬಲ್ಲವು.

೮. ವೃದ್ದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
ವೃದ್ದರಲ್ಲಿ ರೋಗ ನಿರೋಧಕ ಶಕ್ತಿ ಹಿಂದಿನಂತಿರದೇ ಕುಸಿದಿರುವ ಕಾರಣ ಮಕ್ಕಳಂತೆಯೇ ಇವರಿಗೂ ಬೇಗನೇ ಸೋಂಕು ಆವರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಕುಟುಂಬ ಸದಸ್ಯರು ತಮ್ಮ ಮನೆಯಲ್ಲಿರುವ ವೃದ್ದರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು.

೯. ಮುಖ ಮತ್ತು ಮೂಗನ್ನು ಮುಚ್ಚಿಕೊಳ್ಳಿ
ಒಂದು ವೇಳೆ ನಿಮಗೆ ಜ್ವರದಂತಹ ಲಕ್ಷಣಗಳಿದ್ದು ಸತತವಾಗಿ ಸೀನುವಿಕೆಯೂ ಕಾಣಿಸಿಕೊಂಡಿದ್ದರೆ ನೀವು ಸದಾ ನಿಮ್ಮೊಂದಿಗೆ ಟಿಶ್ಯೂ ಕಾಗದವನ್ನು ಜೊತೆಗೆ ಕೊಂಡೊಯ್ಯುವುದು ಮತ್ತು ತಕ್ಷಣವೇ ಕೈಗೆ ಸಿಗುವಂತೆ ಇರಿಸಿಕೊಂಡಿರಬೇಕು. ಯಾವಾಗ ಸೀನು ಎದುರಾಗುತ್ತದೆಯೋ ತಕ್ಷಣವೇ ಈ ಕಾಗದವನ್ನು ಮೂಗಿಗೆ ಅಡ್ಡಲಾಗಿ ಹಿಡಿದೇ ಸೀನಬೇಕು. ಮತ್ತು ಈ ಕಾಗದವನ್ನು ತಕ್ಷಣವೇ ಕಸದ ಬುಟ್ಟಿಗೆ ಎಸೆದು ಬಿಡಬೇಕು.

ತಕ್ಷಣವೇ ಆಲ್ಕೋಹಾಲ್ ಸಹಿತ ಇರುವ ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು. ಒಂದು ವೇಳೆ ಸೀನುವ ಕ್ಷಣದಲ್ಲಿ ಕೈಗೆ ಏನೂ ಸಿಗದಿದ್ದರೆ ಮೊಣಕೈ ಭಾಗವನ್ನೇ ಮೂಗಿನ ಬಳಿ ತೆಗೆದುಕೊಂಡು ಮೂಗಿಗೆ ಅಡ್ಡಲಾಗಿ ಇರಿಸಿ ಸೀನಬೇಕು. ಇದರಿಂದ ಮೊಣಕೈ ಮಲಿನಗೊಳ್ಳಬಹುದೇ ಹೊರತು ಇತರರಿಗೆ ಸೋಂಕು ಹರಡುವುದನ್ನು ಆದಷ್ಟೂ ತಪ್ಪಿಸಬಹುದು.

೧೦. ಮುಖ ರಕ್ಷಣಾ ಮುಸುಕನ್ನು ಮುಟ್ಟಬೇಡಿ
ಮಾಸ್ಕ್ ಅಥವಾ ಮುಖಕ್ಕೆ ರಕ್ಷಣೆ ನೀಡುವ ಮುಸುಕನ್ನು ನೀವು ಧರಿಸಿದ್ದು ಇದರಿಂದ ಬಾಯಿ ಮತ್ತು ಮೂಗನ್ನು ಆವರಿಸಿದ್ದರೆ ಧರಿಸಿದ ಈ ಮುಸುಕನ್ನು ಬರಿಗೈಗಳಿಂದ ಮುಟ್ಟದಿರಿ.

೧೧. ಹೆಚ್ಚುವರಿ ಮುಸುಕುಗಳನ್ನು ನಿಮ್ಮೊಂದಿಗೆ ಇರಿಸಿ
ಸೋಂಕು ಎಲ್ಲೆಡೆ ಇದೆ ಎಂದ ಬಳಿಕವೂ ನಿರ್ಲಕ್ಷ್ಯ ತೋರುವ ಜನ ಸಾಮಾನ್ಯವಾಗಿ ಇದ್ದೇ ಇರುತ್ತಾರೆ. ಕೆಲವರು ಸೋಂಕಿಗೆ ಒಳಗಾಗಿದ್ದರೂ ಇದರ ಅರಿವೇ ಇಲ್ಲದಿರಬಹುದು ಅಥವಾ ಕೆಮ್ಮು ಮತ್ತು ಸೀನುವಿಕೆಯಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂದು ಅವರಿಗೆ ತಿಳಿದೇ ಇರದಿರಬಹುದು. ಹಾಗಾಗಿ, ಈ ವ್ಯಕ್ತಿಗಳೊಂದಿಗೆ ಒಡನಾಟ ನಡೆಸುವ ಅವಶ್ಯಕತೆ ತೋರಿ ಬಂದಾಗ ಇವರಿಗೂ ಮುಖ ಮುಸುಕು ಧರಿಸಿಕೊಳ್ಳಲು ನೀಡಲು ನಿಮ್ಮ ಬಳಿ ಹೆಚ್ಚುವರಿ ಮುಸುಕುಗಳಿರುವುದು ಅವಶ್ಯ.

೧೨. ಮಾಸ್ಕ್ ಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ
ಮಾಸ್ಕ್ ಒಂದನ್ನು ಧರಿಸಿದ ಕೆಲ ಹೊತ್ತಿನ ಬಳಿಕ ಇದನ್ನು ನಿವಾರಿಸಿ ಎಸೆಯಬೇಕು. ಸಾಮಾನ್ಯವಾಗಿ ಮಾಸ್ಕ್ ಗಳನ್ನು ಏಕ ಉಪಯೋಗಕ್ಕೆಂದೇ ತಯಾರಿಸಲಾಗಿರುತ್ತದೆ. ಈ ಮಾಸ್ಕ್ ಮುಟ್ಟಿದ ಬಳಿಕ ತಕ್ಷಣವೇ ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.

೧೩. ಹಸಿ ಆಹಾರಗಳನ್ನು ಸೇವನೆಯನ್ನು ಆದಷ್ಟೂ ತಪ್ಪಿಸಿ
ಕೇವಲ ಸರಿಯಾಗಿ ಬೆಂದಿರುವ ಆಹಾರಗಳನ್ನೇ ಸೇವಿಸಿ. ಸರಿಯಾಗಿ ಬೆಂದಿರದ ಅಥವಾ ಅರ್ಧ ಬೆಂದಿರುವ ಆಹಾರಗಳನ್ನು, ಅದರಲ್ಲೂ ಮಾಂಸದ ಪದಾರ್ಥಗಳನ್ನು ಸೇವಿಸದಿರಿ. ಒಂದು ವೇಳೆ ಹಸಿ ಮಾಂಸ ಅಥವಾ ಇತರ ಅಂಗಗಳನ್ನು ಬರಿಗೈಯಿಂದ ಮುಟ್ಟಿದರೂ ತಕ್ಷಣವೇ ಕೈ ಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.
೧೪. ಉಗಿಯದಿರಿ
ಮನೆ ಅಥವಾ ಕಚೇರಿಯಿಂದ ಹೊರ ಹೋದ ಬಳಿಕ ಎಂದಿಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯದಿರಿ. ಏಕೆಂದರೆ ಒಂದು ವೇಳೆ ನಿಮಗೆ ಸೋಂಕು ಉಂಟಾಗಿದ್ದರೆ ನೀವು ಉಗಿದಿರುವ ಎಂಜಲಿನ ಮೂಲಕ ಹರಡುವ ಸೂಕ್ಷ್ಮ ನೀರಿನ ಕಣಗಳಿಂದಲೂ ವೈರಸ್ ಇತರರಿಗೆ ಹರಡಬಹುದು.

೧೫. ಪ್ರಾಣಿಗಳನ್ನು ಸ್ಪರ್ಶಿಸುವುದನ್ನು ಆದಷ್ಟೂ ತಪ್ಪಿಸಿ
ಪ್ರಾಣಿಗಳನ್ನು ಬೆಳೆಸುವ ಅಥವಾ ವಧಾಗಾರಗಳಿಗೆ ಭೇಟಿ ನೀಡುವುದನ್ನು ಆದಷ್ಟೂ ತಪ್ಪಿಸಿ. ಅಲ್ಲದೇ ರೋಗಪೀಡಿತ ಪ್ರಾಣಿಗಳನ್ನು ಆದಷ್ಟೂ ಸ್ಪರ್ಶಿಸದಿರಿ.

Leave a Comment