ಕೊರೊನ ಅಂಗವಿಕಲರಿಗೆ ಒಡ್ಡಿರುವ ಸವಾಲುಗಳು

 

ಅಂಗವಿಕಲರು ಮತ್ತೊಬ್ಬರಿಂದ ಸಾರ್ವಜನಿಕ ಸ್ಥಳಗಳಲ್ಲಿ ನೆರವನ್ನು ಪಡೆದು ಅವಶ್ಯ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಕೆಲವು ಸವಾಲುಗಳನ್ನು ಈ ಕೊರೋನ ವೈರಾಣು ಅಂಗವಿಕಲರಿಗೆ ವಿಶೇಷವಾಗಿ ಒಡ್ಡಿದೆ.
ಅವುಗಳೆಂದರೆ, ೧. ಅಂಗವಿಕಲರ ಚಲನವಲನಕ್ಕೆ ಸವಾಲು: ಕೊರೋನ ವೈರಾಣುವಿಗೆ ತುತ್ತಾಗದಿರಲು ಸುರಕ್ಷಾ ಕ್ರಮಗಳಿಲ್ಲದೆ ಮುಟ್ಟಬಾರದು ಮತ್ತು ಸ್ಪರ್ಷಿಸಬಾರದು. ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ, ಅಂಧರು ಮತ್ತು ಕೆಲವು ಅಂಗವಿಕಲರು ತಮ್ಮಿಂದಾಗದ ಕೆಲವು ಕೆಲಸಗಳನ್ನು ಮತ್ತೊಬ್ಬರಿಂದ ನೆರವು ಪಡೆದು ನೆರವೇರಿಸಿಕೊಳ್ಳಬೇಕಿದೆ ಮತ್ತು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾರ್ವಜನಿಕ ಸಾರಿಗೆಯಲ್ಲಿ ತೆರಳಲು ಮತ್ತೊಬ್ಬರ ನೆರವನ್ನು ಪಡೆಯಬೇಕಾಗಿದೆ. ಹಾಗೆಯೇ, ಅಂಧರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವಾಗ ಬಿಳಿಕೋಲನ್ನು ಬಳಸಲೇಬೇಕು. ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡು ಕೈಗೆ ಗ್ಲೋಸ್ ಹಾಕಿಕೊಂಡಾಗ ಬಿಳಿಕೋಲು ಸ್ಪರ್ಷಕ್ಕೆ ಅನುಕೂಲಕ್ಕೆ ತಕ್ಕಂತೆ ದೊರೆಯುವುದಿಲ್ಲ. ಇದರಿಂದ ಅಂಧರ ಸಾಗುವಿಕೆಯ ವೇಗ ಮೊದಲಿಗಿಂತ ಕಡಿಮೆಯಾಗಲಿದೆ. ಸಾರ್ವಜನಿಕ ವಾಹನಗಳಲ್ಲಿ ಹತ್ತುವಾಗ, ಕುಳಿತುಕೊಳ್ಳುವಾಗ ದೃಷ್ಟಿಯುಳ್ಳವರಿಗಿಂತಲೂ ಅಂಧರು ಮತ್ತು ಅಂಗವಿಕಲರು ವಾಹನದ ಕಂಬಿಗಳನ್ನು ಮುಟ್ಟಲೇ ಬೇಕು. ಕೈಗೆ ಗ್ಲೋಸ್ ಹಾಕಿಕೊಂಡು ಹಿಡಿದುಕೊಂಡರೂ ಸ್ಪರ್ಷಕ್ಕೆ ಸರಿಯಾಗಿ ದೊರೆಯದು. ನೆರವು ನೀಡುವಾಗಲೂ ಸಾರ್ವಜನಿಕರು ಹಿಂಜರಿಯುವುದು ಸಹಜ. ಆದುದ್ದರಿಂದ, ಪರಿಹಾರಗಳನ್ನು ಕಂಡುಹಿಡಿಯುವ ಚಿಂತನೆಗಳು ಆರಂಭವಾಗಬೇಕಿದೆ.
೨. ಆರ್ಥಿಕ ಸವಾಲು: ಕೊರೋನ ವೈರಾಣುವಿನಿಂದ ದೂರವಿರಬೇಕೆಂದರೆ, ಮಾಸ್ಕ್, ಗ್ಲೋಸ್, ಸಾನಿಟೈಜ಼ರ್ಸ್ ಮತ್ತು ಹೀಗೆ ಹಲವಾರು ಅವಲಂಭಿತ ಸುರಕ್ಷಾ ವಸ್ತುಗಳನ್ನು ಬಳಸಲೇಬೇಕು. ಹೀಗಿರುವಾಗ ಬಹುತೇಕ ಅಂಧ ಹಾಗೂ ಅಂಗವಿಕಲರು ಇನ್ನೂ ಕೂಡ ಬಡತನ ರೇಖೆಯಲ್ಲೇ ಇರುವುದರಿಂದ ಇವುಗಳನ್ನು ಒದಗಿಸಿಕೊಳ್ಳಲು ಹಣವನ್ನು ವ್ಯಯಿಸಬೇಕಾಗಿದೆ. ಜೀವನೋಪಾಯಕ್ಕಾಗಿ ತೊಡಗಿಸಬೇಕಾಗಿದ್ದ ಬಹುಪಾಲು ಹಣವನ್ನು ಅನವಶ್ಯಕವಾಗಿ ಒದಗಿರುವ ಇಂತಹ ಪರಿಸ್ಥಿತಿಯಿಂದ ಜೀವದ ಭದ್ರತೆಗಾಗಿ ಹಣವನ್ನು ತೊಡಗಿಸುವುದು ಕಷ್ಟದಾಯಕವಾಗಿದೆ. ಖಾಸಗಿ ವಲಯದ ಉದ್ಯಮಿಗಳು ಮತ್ತು ಸರ್ಕಾರಗಳು ಅಂಗವಿಕಲರಿಗೆ ಉದ್ಯೋಗ ಅವಕಾಶಗಳನ್ನು ವಿರಳವಾಗಿ ನೀಡುತ್ತಿರುವ ಈ ಹೊತ್ತಲ್ಲಿ ಉದ್ಯೋಗ ಭದ್ರತೆ ಇಲ್ಲದಿದ್ದರೇ ಜೀವನ ನಿರ್ವಹಣೆ ಬಡತನ ರೇಖೆಯ ಅಂಗವಿಕಲರಿಗೆ ಮೊದಲಿಗಿಂತಲೂ ಖಠಿಣವಾಗಲಿದೆ ಮತ್ತು ಸುಸ್ಥಿತಿಯಲ್ಲಿರುವ ಅಂಗವಿಕಲರು ಕೂಡ ಮೊದಲಿಗಿಂತ ಆರ್ಥಿಕವಾಗಿ ಕುಗ್ಗಲಿದ್ದಾರೆ.
೩. ಮಾನಸಿಕ ನೆಮ್ಮದಿಗೆ ಸವಾಲು: ಎಷ್ಟೇ ಸುರಕ್ಷಾ ಕ್ರಮಗಳನ್ನು ಕೈಗೊಂಡು ಅಂಗವಿಕಲರು ಜೀವನ ನಿರ್ವಹಣೆ ಮಾಡುತ್ತಿದ್ದಾಗ್ಯೂ, ಈ ಕೆಲವು ಅನುಮಾನಗಳು ಪ್ರಶ್ನೆಗಳ ರೂಪದಲ್ಲಿ ನೆಮ್ಮದಿಯನ್ನು ಕದಡಬಲ್ಲದು. ಯಾರು ಮುಟ್ಟಿದರು? ಮುಟ್ಟಿದ ವಸ್ತುವಿನ ಮೇಲೆ ಸಂಚಕಾರಿ ವೈರಾಣು ಇತ್ತೆ/ಇರಲಿಲ್ಲವೆ? ನೆರವು ನೀಡಬಯಸುವ ಅಥವಾ ನೆರವಿಗಾಗಿ ಒದಗುವ ವ್ಯಕ್ತಿ ಸೋಂಕಿತ ವ್ಯಕ್ತಿ ಹೌದೆ/ಅಲ್ಲವೆ? ಹೇಗೆ ಗುರುತಿಸುವುದು? ಓಡಾಡಿದ ಕಡೆಯಲ್ಲಾದರೂ ವೈರಾಣು ಇತ್ತೆ/ಇರಲಿಲ್ಲವೆ? ಹೀಗೆ ಹಲವಾರು ಬಗೆಯ ಪ್ರಶ್ನೆಗಳು ಅಂಗವಿಕಲ ವ್ಯಕ್ತಿಗಳಿಗೆ ಆರೋಗ್ಯದಲ್ಲಿ ಏರುಪೇರುವಾದಾಗ ಮೂಡುವುದು ಸಹಜವಾಗಿದೆ. ಅಂಗವಿಕಲರ ಸಂವಹನವನ್ನು ಅಪಹಾಸ್ಯಮಾಡುವ ಮತ್ತು ಲೇವಡಿಮಾಡುವ ಸಾಹಿತ್ಯ ಮತ್ತು ವರ್ತನೆಗಳು ಭವಿಷ್ಯದಲ್ಲಿ ಅಂಗವಿಕಲರ ನೆಮ್ಮದಿಗೆ ಧಕ್ಕೆ ತರಲಿದೆ. ಇಂತಹ ಸವಾಲುಗಳನ್ನು ಮೆಟ್ಟಿನಿಲ್ಲುವಂತಾಗಲು ಮತ್ತು ಅನುಮಾನಗಳನ್ನು ನಿವಾರಿಸಬೇಕೆಂದರೆ, ಸಂಚಕಾರಿ ವೈರಾಣುಗಳನ್ನು ನಿರ್ಮೂಲನೆ ಮಾಡುವುದಾಗಿ ಸರ್ಕಾರಗಳು ಮತ್ತು ಸಮಾಜವು ಅಂಗವಿಕಲರಿಗೆ ಭರವಸೆಯನ್ನು ನೀಡಬೇಕಿದೆ ಮತ್ತು ಅಂಗವಿಕಲರ ಸಂವಹನ ತಡೆರಹಿತವಾಗಿರಲು+ಸುಸ್ಥಿರವಾಗಿರಲು ಪರಿಹಾರೋಪಾಯಗಳನ್ನು ಅನುಷ್ಠಾನಗೊಳಿಸಬೇಕಿದೆ.

Leave a Comment