ಕೊರೊನಾ : 34 ಗುಣಮುಖರು – ಮತ್ತೇ 80 ಜನರಿಗೆ ಸೋಂಕು ಸಾಧ್ಯ

* ಲಿಂಗಸೂಗೂರು – ಮಸ್ಕಿ, ದೇವದುರ್ಗ : ಮಹಾರಾಷ್ಟ್ರ ವಲಸಿಗರೇ ಬಹುತೇಕ
ರಾಯಚೂರು.ಮೇ.31- ಜಿಲ್ಲೆಯಲ್ಲಿ ಮೊದಲ ಕೊರೊನಾ ಸಾವಿನ ಘಟನೆ ಬೆಳಕಿಗೆ ಬಂದಿದ್ದರೇ, ಮತ್ತೊಂದೆಡೆ 34 ಜನ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಇಂದು ಮತ್ತೇ 80 ಜನರಿಗೆ ಕೊರೊನಾ ಸೋಂಕು ದೃಢಪಡುವ ಸಾಧ್ಯತೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುನ್ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 134 ಕೊರೊನಾ ಸೋಂಕಿತರಲ್ಲಿ 14 ದಿನಗಳ ಮುಂಚೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಈ ಎಲ್ಲಾರನ್ನು ಕೋವಿಡ್-19 ಓಪೆಕ್ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಇವರಲ್ಲಿ 34 ಜನ ಕೊರೊನಾ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ. ಇಂದು ಕೋವಿಂಡ್ ಆಸ್ಪತ್ರೆಯಿಂದ ಈ ಎಲ್ಲಾ ಗುಣಮುಖ 34 ಜನರನ್ನು ಬಿಡುಗಡೆಗೊಳಿಸಲಾಯಿತು. ಸ್ವತಃ ಜಿಲ್ಲಾಧಿಕಾರಿ ವೆಂಕಟೇಶಕುಮಾರ ಅವರು ಕೋವಿಡ್ ಆಸ್ಪತ್ರೆ ಮುಖ್ಯದ್ವಾರದ ಮುಂದೆ ನಿಂತು ಹೂ ಚೆಲ್ಲುವ ಮೂಲಕ ಗುಣಮುಖರಾದ ಎಲ್ಲರನ್ನೂ ತಮ್ಮ ತಮ್ಮ ಮನೆಗಳಿಗೆ ಕಳುಹಿಸಿದರು.
ಮುಂದಿನ 14 ದಿನಗಳ ಕಾಲ ರಿಪೋರ್ಟಿಂಗ್ ಅವಧಿಯನ್ನಾಗಿ ಪರಿಗಣಿಸಿ, ಈ ಎಲ್ಲರ ಬಗ್ಗೆ ನಿಗಾವಹಿಸಲಾಗುತ್ತದೆ. ಆರೋಗ್ಯ ದಿಗ್ಬಂಧನಾ ಮುದ್ರೆ ಒತ್ತಿ ಮನೆ ಕ್ವಾರಂಟೈನ್‌ ಇರುವಂತೆ ಸೂಚಿಸಲಾಗಿದೆ. ಆಶಾ ಕಾರ್ಯಕರ್ತರು ಪ್ರತಿಯೊಬ್ಬ ಕೋವಿಡ್‌ನಿಂದ ಚೇತರಿಸಿಕೊಂಡ ಅವರನ್ನು ನಿಗಾವಹಿಸಲಾಗುತ್ತದೆ. ಈ ಅವಧಿಯಲ್ಲಿ ಯಾರು ಸಹ ಮನೆಯಿಂದ ಹೊರಗೆ ಬರುವಂತಿಲ್ಲ. ಸಾಮಾಜಿಕ ಅಂತರ ನಿಯಮ ಉಲ್ಲಂಘಿಸುವಂತಿಲ್ಲವೆಂದು ಕಟ್ಟುನಿಟ್ಟಿನ ಸೂಚನೆ ಜಾರಿಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ, ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಅವರು, ಜಿಲ್ಲೆಯಲ್ಲಿ ಪ್ರಥಮ ಕೊರೊನಾ ಪ್ರಕರಣದಿಂದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಿರುವ 34 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇವರಲ್ಲಿ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳಿಲ್ಲ. ಮತ್ತೊಮ್ಮೆ 14 ದಿನಗಳ ನಂತರ ಈ ಎಲ್ಲಾ 34 ಜನರ ಗಂಟಲು, ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ಪ್ರಕರಣಗಳ ವರದಿಯಲ್ಲಿ ನೆಗೆಟಿವ್ ಎಂದು ದೃಢಪಟ್ಟ ಕಾರಣ ಇವರನ್ನು ಇಲ್ಲಿಂದ ತಮ್ಮ ತಮ್ಮ ಮನೆಗಳಿಗೆ ಕಳುಹಿಸಲಾಗುತ್ತದೆ.
ಮಲಿಯಾಬಾದ್ ಗ್ರಾಮದ ಬಾಲಕಿಗೆ ನೆಗೆಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಬಾಲಕಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಮಲಿಯಾಬಾದ್ ಕಂಟೋನ್ಮೆಂಟ್ ಯಥಾರೀತಿ ಮುಂದುವರೆಸಲಾಗುತ್ತದೆ. ಕೊರೊನಾ ತಪಾಸಣೆಗೆ ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಲ್ಯಾಬ್ ಉದ್ಘಾಟಿಸಲಾಗುತ್ತದೆ. ಕೊರೊನಾ ಪರೀಕ್ಷೆಗೆ ಒಂದು ಶಿಫ್ಟ್‌ಗೆ 69 ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ.
ಒಂದು ದಿನಕ್ಕೆ 800 ವರೆಗೂ ಟೆಸ್ಟ್ ಮಾಡುವ ಸಾಮರ್ಥ್ಯ ಹೊಂದಿದೆ. ಹೊರಗನಿಂದ ಬಂದವರ ಮಾದರಿಗಳನ್ನು ಈಗಾಗಲೇ ಬೆಂಗಳೂರಿಗೆ ಕಳುಹಿಸಲಾಗಿದೆ. ಇಂದಿನಿಂದ ಪರೀಕ್ಷೆ ಕಾರ್ಯ ರಾಯಚೂರಿನಲ್ಲಿಯೇ ನಿರ್ವಹಿಸಲಾಗುತ್ತದೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ, ರಿಮ್ಸ್ ಡೀನ್ ಬಸವರಾಜ ಪೀರಾಪೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share

Leave a Comment