ಕೊರೊನಾ 3 ಬಲಿ 127 ಮಂದಿಗೆ ಸೋಂಕು: ರಾಜ್ಯಕ್ಕೆ ಮುಂಬಯಿ ಕಂಟಕ ಕಹಿಯಾದ ಮಂಡ್ಯ ಕಬ್ಬು

ಬೆಂಗಳೂರು, ಮೇ ೧೯- ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಇಂದು ಒಂದೇ ದಿನ 127 ಹೊಸಸೋಂಕು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,373ಕ್ಕೇರಿದ್ದು, ಜನರಲ್ಲಿ ತೀವ್ರ ಆತಂಕ ಉಂಟುಮಾಡಿದೆ.

ಮಂಡ್ಯವೊಂದರಲ್ಲೇ 61 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇಡೀ ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಸೋಂಕಿತರ ಪಟ್ಟಿ ಪ್ರಕಾರ ಮಂಡ್ಯದಲ್ಲಿ – 62, ದಾವಣಗೆರೆ – 19, ಶಿವಮೊಗ್ಗದಲ್ಲಿ – 12, ಕಲಬುರಗಿಯಲ್ಲಿ – 11, ಬೆಂಗಳೂರು ನಗರದಲ್ಲಿ – 5, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ – 4, ಹಾಸನದಲ್ಲಿ – 3, ಚಿಕ್ಕಮಗಳೂರು – 2, ಚಿತ್ರದುರ್ಗ, ಯಾದಗಿರಿ, ಗದಗ, ವಿಜಯಪುರದಲ್ಲಿ ತಲಾ – 1 ಪ್ರಕರಣಗಳು ಪತ್ತೆಯಾಗಿವೆ.

ಹಸಿರು ವಲಯದಲ್ಲಿದ್ದ ಚಿಕ್ಕಮಗಳೂರಿಗೂ ಸೋಂಕು ಹರಡಿರುವುದು ಅಲ್ಲಿನ ಜನರನ್ನು ಬೆಚ್ಚಿಬೀಳಿಸಿದೆ. ಇಂದು ಪತ್ತೆಯಾದ ಹೊಸ 127 ಪ್ರಕರಣಗಳ ಪೈಕಿ 91 ಮಂದಿ ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಉಳ್ಳವರಾಗಿದ್ದು, ಮುಂಬೈಗೆ ಭೇಟಿಕೊಟ್ಟವರಿಂದಲೇ ದಿನೇದಿನೇ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿದೆ.
ಕೊರೊನಾ ಸೋಂಕಿಗೆ ಇಂದು ಒಂದೇ ದಿನ ಮೂವರು ಬಲಿಯಾಗಿದ್ದು, ಬೆಂಗಳೂರು ನಗರ, ಬಳ್ಳಾರಿ ಹಾಗೂ ವಿಜಯಪುರದಲ್ಲಿ ತಲಾವೊಬ್ಬರು ಸಾವನ್ನಪ್ಪಿರುವುದು ವರದಿಯಾಗಿದೆ.

ರಾಜ್ಯದಲ್ಲಿ ಇದುವರೆಗೂ ಸೋಂಕಿಗೆ ಬಲಿಯಾದವರ ಸಂಖ್ಯೆ 40ಕ್ಕೇರಿದೆ. 530 ಮಂದಿ ಗುಣಮುಖರಾಗಿದ್ದಾರೆ..
ಇಂದು ಪತ್ತೆಯಾದ ಸೋಂಕು ಪ್ರಕರಣಗಳ ಪೈಕಿ 15 ಮಕ್ಕಳಲ್ಲೂ ಸೋಂಕಿರುವುದು ದೃಢಪಟ್ಟಿದ್ದು, ಪೋಷಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಳೆದ 2 – 3 ವಾರಗಳಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಸೋಂಕು ಹರಡುತ್ತಿದ್ದು, ಸೋಂಕಿತರ ಸಂಖ್ಯೆಯೂ ನಿತ್ಯವೂ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಲು ಅನ್ಯರಾಜ್ಯಗಳಿಗೆ ಭೇಟಿಕೊಟ್ಟವರು ಮತ್ತು ಜೀವನೋಪಾಯಕ್ಕಾಗಿ ಬಿಹಾರ, ಮುಂತಾದ ರಾಜ್ಯಗಳಿಂದ ಬಂದವರಿಂದಲೂ ಸೋಂಕು ಹರಡಲು ಕಾರಣವಾಗಿದೆ.

ಬೆಂಗಳೂರಿನಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 8ಕ್ಕೇರಿದೆ. ಈ ನಡುವೆ ಬೆಂಗಳೂರಿನ 32 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿ ನಾಪತ್ತೆಯಾಗಿರುವುದು ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಬೋರಿಂಗ್ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದು, ಈ ಸಂದರ್ಭದಲ್ಲಿ ವ್ಯಕ್ತಿ ಕೆಜಿ ಹಳ್ಳಿ ವಿಳಾಸ ನೀಡಿದ್ದಾನೆ. ಪರೀಕ್ಷೆಯಿಂದ ಸೋಂಕಿರುವುದು ದೃಢಪಟ್ಟ ನಂತರ, ಬಿಬಿಎಂಪಿ ಅಧಿಕಾರಿಗಳು, ಈ ವ್ಯಕ್ತಿಯ ವಿಳಾಸಕ್ಕೆ ಹೋಗಿ ನೋಡಿದಾಗ ಅಲ್ಲಿಲ್ಲದಿರುವುದು ಹೊಸಸಮಸ್ಯೆಯಾಗಿದೆ. ಆತನನ್ನು ಹುಡುಕುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ದಾವಣಗೆರೆಯಲ್ಲಿ 19 ಹೊಸಪ್ರಕರಣಗಳು ಪತ್ತೆಯಾಗುವ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ.

ಕಲಬುರಗಿಯಲ್ಲೂ ಹೊಸದಾಗಿ 11 ಪ್ರಕರಣಗಳು ಪತ್ತೆಯಾಗಿದ್ದು, ಮುಂಬೈ ನಂಟು ಹೊಂದಿರುವವರಿಂದಲೇ ಸೋಂಕು ಹರಡುತ್ತಿದೆ ಎಂದು ಹೇಳಲಾಗಿದೆ.ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 125ಕ್ಕೇರಿದೆ.

ಸಹಜ ಸ್ಥಿತಿಯತ್ತ
ರಾಜ್ಯದಲ್ಲಿ ಲಾಕ್ ಡೌನ್ ನಿಯಮಗಳನ್ನು ಬಹಳಷ್ಟು ಸಡಿಲಗೊಳಿಸಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮುಂದಾಗಿರುವುದರಿಂದ ಬೆಂಗಳೂರು ಸೇರಿದಂತೆ, ರಾಜ್ಯದಲ್ಲೆಡೆ ಜನಜೀವನ ಸಹಜ ಸ್ಥಿತಿಯತ್ತ ವಾಲುತ್ತಿದೆ.
ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ ಸೇರಿದಂತೆ, ವಿವಿಧ ಸಾರಿಗೆ ನಿಗಮಗಳ ಬಸ್ ಸಂಚಾರ ಮಂದಗತಿಯಲ್ಲಿ ಆರಂಭವಾಗಿದ್ದು, ಜನರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.

ಕೊರೊನಾ ಭೀತಿಯಿಂದ ಜನರು ಇನ್ನೂ ಹೊರಬಂದಿಲ್ಲವಾದರೂ, ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಎಲ್ಲೆಡೆ ಅಂಗಡಿ, ಮುಂಗಟ್ಟು, ಕೈಗಾರಿಕೆಗಳು, ಮತ್ತಿತರ ಚಟುವಟಿಕೆಗಳು ಗರಿಗೆದರಿದ್ದು, ಇದರಿಂದಲೂ ಸೋಂಕು ಹರಡುವ ಭೀತಿ ಜನರನ್ನು ಕಂಗೆಡಿಸಿದೆ.

Leave a Comment