ಕೊರೊನಾ ಹೆಚ್ಚಳ ಜನರ ಕಳವಳ

ಬೆಂಗಳೂರು, ಮಾ. ೨೬- ಯಮ ಸ್ವರೂಪಿ ಕೊರೊನಾ ವೈರಾಣು ಸೋಂಕು ಪೀಡಿತರ ಸಂಖ್ಯೆ ರಾಜ್ಯದಲ್ಲೂ ದಿನೇದಿನೇ ಹೆಚ್ಚಾಗುತ್ತಿದ್ದು, ಇಂದು ಈ ಸಂಖ್ಯೆ 56ಕ್ಕೇರಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ. ರಾಜ್ಯದಲ್ಲೆಡೆ ಲಾಕ್ ಡೌನ್ ಮುಂದುವರೆದಿದ್ದರೂ, ಜನರು ಹಾದಿ-ಬೀದಿಗಳಲ್ಲಿ ಓಡಾಡುತ್ತಿರುವುದು ಸೋಂಕು ಹರಡುವುದಕ್ಕೆ ಕಾರಣವಾಗಿದೆ.

ನಿನ್ನೆ ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 40 ಇದ್ದದ್ದು, ಇಂದು 56ಕ್ಕೇರಿದೆ. ಮಹಾರಾಷ್ಟ್ರದಲ್ಲಿ – 128 ಹಾಗೂ ಕೇರಳದಲ್ಲಿ – 118 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ ನಂತರದ ಸ್ಥಾನಕ್ಕೆ ಏರಿದೆ. ಇಂದು ಒಂದೇ ದಿನ ಹತ್ತು ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪದೇಪದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಮನೆಗಳಲ್ಲೇ ಉಳಿಯಬೇಕೆಂದು ಮನವಿ ಮಾಡಿಕೊಂಡಿದ್ದರೂ, ರಾಜ್ಯದ ಕೆಲವು ನಗರಗಳಲ್ಲಿ ಜನರು ಹೊರಬರುತ್ತಿರುವುದು ಆತಂಕಕ್ಕೆ ಈಡುಮಾಡಿದೆ.

ವರ್ಷದ ತೊಡಕು ದಿನವಾದ ಇಂದು ಜನರು ಬೆಳಿಗ್ಗೆಯಿಂದಲೇ ಮಾಂಸದ ಅಂಗಡಿಗಳಿಗೆ ಮುಗಿಬೀಳುತ್ತಿದ್ದು, ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಜನರಿಗೆ ಮನವಿ ಮಾಡಿದ್ದರೂ ಜನರು, ಅದನ್ನು ಗಂಭೀರವಾಗಿ ಪರಿಗಣಿಸದೆ, ಬೆಳಿಗ್ಗೆಯಿಂದಲೇ ಹಣ್ಣು – ತರಕಾರಿ ಮಾರುಕಟ್ಟೆ ಹಾಗೂ ಮಾಂಸದ ಅಂಗಡಿಗಳ ಮುಂದೆ ಜಮಾಯಿಸಿ, ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.

ಬೆಂಗಳೂರು ಸೇರಿದಂತೆ, ರಾಜ್ಯದ ವಿವಿಧ ನಗರಗಳಲ್ಲಿ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ, ಜನರು ಗುಂಪುಸೇರುತ್ತಿದ್ದು, ಅವರನ್ನು ಚದುರಿಸಲು ಪೊಲೀಸರು ಲಾಠಿ ರುಚಿ ತೋರಿಸಬೇಕಾದ ಅನಿವಾರ್ಯತೆ ಎದುರಾಯಿತು.

ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಯುವಕನೊಬ್ಬನಿಗೆ ಪೊಲೀಸರು ಕಾಲಿಗೆ ಗುಂಡು ಹಾರಿಸಿರುವ ಘಟನೆ ನಡೆದಿದೆ. ವಾಹನಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದರೂ, ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು, ಬೀದಿಗೆ ಬರುತ್ತಿರುವುದು ಕಂಡುಬರುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲೂ ಜನರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ಕೇರ್ ಮಾಡದೆ ಜನರು, ಗುಂಪು ಸೇರುತ್ತಿರುವುದು ಅವರ ಉಡಾಫೆ ಮತ್ತು ನಿರ್ಲಕ್ಷ್ಯಧೋರಣೆಗೆ ಕನ್ನಡಿ ಹಿಡಿದಂತಾಗಿದೆ.

ರಸ್ತೆಗಿಳಿದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿರುವುದರ ಜೊತೆಗೆ, ರಸ್ತೆಗಳಲ್ಲೇ ಬಸ್ಕಿ ಹೊಡೆಯುವಂತೆ ಹೇಳುವ ಮೂಲಕ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ನೀಡುತ್ತಿದ್ದಾರೆ.
ಮುಖ್ಯಮಂತ್ರಿ ಸೂಚನೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ತಮ್ಮ ನಿವಾಸ ದವಳಗಿರಿಯಲ್ಲೇ ಉಳಿದುಕೊಂಡಿದ್ದು, ತಮ್ಮನ್ನು, ಸಚಿವಱ್ಯಾರೂ ಭೇಟಿ ಮಾಡಲು ಬರುವ ಅಗತ್ಯವಿಲ್ಲವೆಂದು ಕಟ್ಟಪ್ಪಣೆ ಮಾಡಿದ್ದಾರೆ. ಯುಗಾದಿ ಹಬ್ಬದ ಶುಭಾಶಯ ಕೋರಲು ಸಚಿವಱ್ಯಾರೂ ತಮ್ಮ ಭೇಟಿಗೆ ಬರದಂತೆ ಸೂಚಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ಹರಡದಂತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ರಚಿಸಲಾಗಿರುವ ಕಾರ್ಯಪಡೆ ಮುಖ್ಯಸ್ಥ ಡಾ. ಸುಧಾಕರ್ ಅವರು, ಎಲ್ಲಾ ರೀತಿಯ ಮುಂಜಾಗ್ರತೆ ಕೈಗೊಳ್ಳುವ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ, ಬೋರಿಂಗ್ ಆಸ್ಪತ್ರೆ ಸೇರಿದಂತೆ, ಪ್ರತ್ಯೇಕ ನಿಗಾ ಘಟಕಗಳನ್ನು ಎಲ್ಲೆಡೆ ತೆರೆಯಲು ಅಗತ್ಯಕ್ರಮ ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲೂ ವಾರ್ ರೂಂ ಪ್ರಾರಂಭಿಸಲಾಗಿದೆ. ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ 218 ಸೋಂಕಿತರಿಗೆ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಲಾಕ್ ಡೌನ್
ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲೂ ಲಾಕ್ ಡೌನ್ ಜಾರಿಯಲ್ಲಿದ್ದು, ಯಾವುದೇ ಸಭೆ – ಸಮಾರಂಭ, ಜಾತ್ರೆ, ರಥೋತ್ಸವ, ಮುಂತಾದ ಸಮಾರಂಭಗಳನ್ನು ಏರ್ಪಡಿಸದಂತೆ, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತ ಜವಾಬ್ದಾರಿಯನ್ನು ನೀಡಲಾಗಿದ್ದು, ಕರ್ಫ್ಯೂ ಮಾದರಿಯಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಮಾಡಲಾಗಿದೆ.
ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಬಿಎಂಟಿಸಿ ಸಾರಿಗೆ ಸೌಲಭ್ಯವನ್ನು ಅಗತ್ಯ ಸೇವೆಗಳ ಸಿಬ್ಬಂದಿಗೆ ಮಾತ್ರ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸೇವೆ ನೀಡುವವರಿಗಾಗಿ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳು ಕಾರ್ಯ ನಿರ್ವಹಿಸಲಿವೆ. ಜನಸಾಮಾನ್ಯರು ಈ ಬಸ್‌ಗಳಲ್ಲಿ ಓಡಾಡುವಂತಿಲ್ಲ.
ಪೊಲೀಸ್,ಆಸ್ಪತ್ರೆ ಸಿಬ್ಬಂದಿ, ದಾದಿಯರು, ನೌಕರರು, ಬ್ಯಾಂಕ್ ಉದ್ಯೋಗಿಗಳು ಮತ್ತು ಮಾಧ್ಯಮದವರಿಗೆ ಮಾತ್ರ ಈ ಸೌಲಭ್ಯ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಬಾಕ್ಸ್ – 1
* ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 56ಕ್ಕೇರಿಕೆ.
* ರಾಜ್ಯದಲ್ಲೆಡೆ ಲಾಕ್ ಡೌನ್ ಮುಂದುವರಿಕೆ.
* ಸೋಂಕಿತರಿಗೆ ಪ್ರತ್ಯೇಕ ನಿಗಾ ಘಟಕಗಳಲ್ಲಿ ಚಿಕಿತ್ಸೆ.
* ಮನೆಬಿಟ್ಟು ಹೊರಬರದಂತೆ, ಸೂಚನೆ ನೀಡಿದ್ದರೂ, ಜನರಿಂದ ನಿಯಮ ಉಲ್ಲಂಘನೆ.
* ತಮ್ಮ ಭೇಟಿಗೆ ಬರದಂತೆ, ಸಚಿವರಿಗೆ ಮುಖ್ಯಮಂತ್ರಿ ಕಟ್ಟಪ್ಪಣೆ.
* ಹಣ್ಣು, ತರಕಾರಿ ಮಾರುಕಟ್ಟೆಗಳಿಗೆ ಮುಗಿಬಿದ್ದ ಸಾರ್ವಜನಿಕರು.

ಬಾಕ್ಸ್ – 2
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆಘಾತಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದೆ.
* ಸಂಜಯ ನಗರ – 4
* ಹೆಬ್ಬಾಳ – 6
* ದೇವನಹಳ್ಳಿ – 4
* ಬಿಟಿಎಂ ಲೇಔಟ್ – 2
* ಮಲ್ಲೇಶ್ವರಂ – 1
* ಆರ್.ಟಿ. ನಗರ – 3
* ಜೀವನ್ ಭೀಮಾನಗರ – 1
* ಪೇಟೆ ಏರಿಯಾ – 4
* ಶೇಷಾದ್ರಿಪುರಂ – 3
* ಶಿವಾಜಿನಗರ – 5
* ಬೆಳ್ಳಂದೂರು – 2
* ಕೆ.ಆರ್. ಪುರಂ, ಮಾರತ್‌ಹಳ್ಳಿ, ವರ್ತೂರು, ವೈಟ್ ಫೀಲ್ಡ್ – 13
* ಹೊರಮಾವು, ಕಲ್ಯಾಣ ನಗರ, ಕಮ್ಮನಹಳ್ಳಿ, ಹೆಣ್ಣೂರು ಕ್ರಾಸ್, ಲಿಂಗರಾಜಪುರಂ – 10.

Leave a Comment