ಕೊರೊನಾ ಹೆಚ್ಚಳ ಜನರಲ್ಲಿ ತಳಮಳ

ನವದೆಹಲಿ, ಏ. ೬- ಕೊರೊನಾ ಹೆಮ್ಮಾರಿ ತನ್ನ ರುದ್ರನರ್ತನವನ್ನು ದೇಶವ್ಯಾಪಿ ಮುಂದುವರೆಸಿದ್ದು, ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ದಿನೇದಿನೇ ಹೆಚ್ಚಾಗುತ್ತಿರುವುದು, ಜನರಲ್ಲಿ ತೀವ್ರ ಕಳವಳ, ಆತಂಕ ಉಂಟುಮಾಡಿದೆ. ಕಣ್ಣಿಗೆ ಕಾಣದೆ ಸಾವಿನ ಛಾಯೆ ಹೊದ್ದಿರುವ ಈ ಸೋಂಕಿನ ಮೂಲ ಎಲ್ಲಿಂದ ಆರಂಭವಾಗುತ್ತಿದೆ ಎಂಬುದನ್ನು ಪತ್ತೆಮಾಡುವುದು ವೈದ್ಯ ಸಮುದಾಯ ಹಾಗೂ ಸಂಶೋಧಕರಿಗೆ ಸವಾಲಾಗಿ ಪರಿಣಮಿಸಿದೆ.

ಒಂದೆಡೆ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡವರು ದೇಶದ ವಿವಿಧ ಭಾಗಗಳಿಗೆ ಹಂಚಿಕೆಯಾಗಿರುವುದು ಕೊರೊನಾ ಸೋಂಕು ವ್ಯಾಪಿಸಲು ಪ್ರಮುಖ ಕಾರಣವೆಂದು ಹೇಳಲಾಗುತ್ತಿದ್ದರೂ, ಮತ್ತೊಂದೆಡೆ ಯಾವುದೇ ಪ್ರವಾಸ ಇತಿಹಾಸ ಹಾಗೂ ಸೋಂಕಿತರ ಸಂಪರ್ಕಕ್ಕೆ ಬರದಿರುವುದೂ ಸೋಂಕು ಹರಡಲು ಕಾರಣವಾಗುತ್ತಿರುವುದು ಆರೋಗ್ಯಾಧಿಕಾರಿಗಳಿಗೆ ತಲೆನೋವಾಗಿದೆ.

ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದ್ದು, ಈಗಾಗಲೇ 4,019 ಪ್ರಕರಣಗಳು ದೃಢಪಟ್ಟಿವೆ. ಸೋಂಕಿಗೆ ಬಲಿಯಾದವರ ಸಂಖ್ಯೆ 109 ಆಗಿದ್ದು, ಇದು ಇಷ್ಟಕ್ಕೆ ನಿಲ್ಲುವ ಯಾವುದೇ ಮುನ್ಸೂಚನೆಗಳು ಕಾಣಸಿಗದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಚಿಂತೆಗೆ ಈಡುಮಾಡಿದೆ. ನಿನ್ನೆ ಒಂದೇ ದಿನ 16 ಮಂದಿ ಸೋಂಕಿಗೆ ಬಲಿಯಾಗಿದ್ದು, ಹೊಸದಾಗಿ 514 ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಜನರನ್ನು ಭಯಭೀತರನ್ನಾಗಿಸಿದೆ.

ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಜಾರಿಯಾಗಿ 13 ದಿನಗಳು ಕಳೆದಿದ್ದರೂ, ಅದರ ಮಧ್ಯೆಯೂ ಸೋಂಕಿತರು ಹಾಗೂ ಸೋಂಕಿಗೆ ಬಲಿಯಾದವರ ಸಂಖ್ಯೆ ಏರುಮುಖವಾಗಿರುವುದು ಎಲ್ಲರಲ್ಲೂ ತಳಮಳ ಉಂಟುಮಾಡಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ, ಕೇವಲ ನಾಲ್ಕು ದಿನಗಳಲ್ಲಿ ಸೋಂಕಿತರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿರುವುದು ತೀವ್ರ ಕಳವಳ ಉಂಟುಮಾಡಿದೆ.

ಇದುವರೆಗೂ ಪತ್ತೆಯಾಗಿರುವ ಸೋಂಕಿತರ ಪೈಕಿ ಶೇ. 80 ರಷ್ಟು ಸೋಂಕಿತರು 62 ಜಿಲ್ಲೆಗಳಿಗೆ ಸೇರಿದವರಾಗಿದ್ದು, ಬರುವ 14ರ ನಂತರ, ಲಾಕ್ ಡೌನ್ ನಿಷೇಧ ಕ್ರಮವನ್ನು ದೇಶದ ಉಳಿದೆಡೆ ಹಿಂತೆಗೆದುಕೊಂಡರೂ, ಈ 62 ಜಿಲ್ಲೆಗಳಲ್ಲಿ ಮುಂದುವರೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದೇಶದ 274 ಜಿಲ್ಲೆಗಳಲ್ಲಿ ಕೋವಿಡ್ – 19ರ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಧಾರ್ಮಿಕ ಸಮಾವೇಶ, ಕೊರೊನಾ ಸೋಂಕು ಹರಡುವುದರ ಹಾಟ್ ಸ್ಪಾಟ್ ಆಗಿದ್ದು, ಈ ಸಮಾವೇಶದಲ್ಲಿ ಪಾಲ್ಗೊಂಡವರನ್ನು ಪತ್ತೆಹಚ್ಚಿ ಕ್ವಾರಂಟೈನ್‌ಗೆ ಕಳುಹಿಸುವ ಕೆಲಸದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಡಗಿವೆಯಾದರೂ, ಕೆಲವರು ಕಣ್ತಪ್ಪಿಸಿಕೊಂಡು ಓಡಾಡುತ್ತಿರುವುದು ಉದ್ದೇಶಪೂರ್ವಕವಾಗಿಯೇ ಸೋಂಕು ಹರಡಿಸುವ ಪ್ರಯತ್ನ ನಡೆದಿದೆಯೇ ಎಂಬ ಅನುಮಾನಗಳು ಹುಟ್ಟಿಕೊಳ್ಳುವಂತಾಗಿದೆ.

ಸಮಾವೇಶದ ನಂತರ, ದೇಶದ ವಿವಿಧ ಮಸೀದಿಗಳಲ್ಲಿ ಕೆಲವರು ಆಶ್ರಯ ಪಡೆದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಅವರಿಗಾಗಿ ಬೇಟೆಯಾಡುವ ಕೆಲಸ ಮುಂದುವರೆದಿದೆ. ಇದರಲ್ಲಿ ಪಾಲ್ಗೊಂಡಿದ್ದ ವಿದೇಶಿಯರು, ಧರ್ಮಪ್ರಚಾರದ ಹೆಸರಿನಲ್ಲಿ ಮುಸ್ಲಿಮರ ಮನೆಗಳಲ್ಲಿ ಆಶ್ರಯ ಪಡೆದಿರುವುದು, ಆಶ್ರಯದಾತರು ಈ ವಿಚಾರವನ್ನು ಜಿಲ್ಲಾಡಳಿತ ಮತ್ತು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡದೆ ಇರುವುದರಿಂದ ಸೋಂಕು ಉಳ್ಳವರು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕೆಲಸಕ್ಕೆ ಅಡ್ಡಿಯಾಗುತ್ತಿದೆ.

ಮಹಾಮಾರಿ ಹರಡುವುದನ್ನು ತಪ್ಪಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆಗಳಿಂದ ಜನರು ಹೊರಗೆ ಬರದಂತೆ, ಮನೆಯಲ್ಲೇ ಉಳಿಯಬೇಕು ಎಂಬ ಸರ್ಕಾರ ಪರಿಪರಿಯಾಗಿ ಮಾಡಿಕೊಂಡ ಮನವಿಗೆ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲದ ಕಾರಣ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ತಬ್ಲಿಘಿ ಜಮಾತ್ ಸಮಾವೇಶದ ನಂಟು ಹೊಂದಿರುವವರು ದೇಶದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತೆರಳಿದ್ದು, ಅವರಿಂದಲೇ ಸೋಂಕು ಹರಡುತ್ತಿದೆ ಎಂಬುದು ಆಘಾತಕಾರಿ ಅಂಶವಾಗಿದೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ನಂತರದ ಸ್ಥಾನದಲ್ಲಿ ತಮಿಳುನಾಡು ಇದೆ. ಮಹಾರಾಷ್ಟ್ರದಲ್ಲಿ 748 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಮುಂಬೈ ಕೊರೊನಾ ವೈರಸ್‌ನ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 113 ಹೊಸಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಮುಂಬೈನಲ್ಲಿ 81, ಪುಣೆಯಲ್ಲಿ 18, ಔರಂಗಾಬಾದ್‌ನಲ್ಲಿ 4, ಅಹಮದ್ ನಗರದಲ್ಲಿ 3, ಕಲ್ಯಾಣ್ – ದೊಂಬಿವಿಲಿ ಹಾಗೂ ಥಾಣೆಯಲ್ಲಿ ತಲಾ – 2, ಒಸ್ಮಾನಾಬಾದ್ ಹಾಗೂ ವಸಾಯಿಯಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ.

ಗುಜರಾತ್‌ನಲ್ಲಿ ಪತ್ತೆಯಾದ ಸೋಂಕಿತ ವ್ಯಕ್ತಿಯೊಬ್ಬರಿಗೆ, ಮಹಾರಾಷ್ಟ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಈ ನಡುವೆ ತಬ್ಲಿಘಿ ಇ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡು ಕರ್ನಾಟಕಕ್ಕೆ ವಾಪಾಸ್ ಆಗಿರುವ ಮೂವರು ಮಹಿಳೆಯರಲ್ಲಿ ಸೋಂಕಿರುವುದು ಇದೇ ಮೊದಲ ಬಾರಿಗೆ ಪತ್ತೆಯಾಗಿರುವ ಅಂಶ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ.

ರಾಜಸ್ತಾನದಲ್ಲಿ ಸೋಂಕಿತರ ಸಂಖ್ಯೆ 274ಕ್ಕೇರಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ. ನಿನ್ನೆ ಒಂದೇ ದಿನ 8 ಮಂದಿಯಲ್ಲಿ ಸೋಂಕಿರುವುದು ಪರೀಕ್ಷೆಯಿಂದ ಪತ್ತೆಯಾಗಿದೆ.  ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 503ಕ್ಕೇರಿದ್ದು, ರಾಷ್ಟ್ರ ರಾಜಧಾನಿ ಜನರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.

* ಮಾಯಾವಿಯ ಮೂಲ ಹುಡುಕುವುದೇ ವೈದ್ಯ ಸಮುದಾಯಕ್ಕೆ ಸವಾಲು.
* ಮಹಾಮಾರಿಗೆ ದೇಶಾದ್ಯಂತ 109 ಅಮಾಯಕರ ಬಲಿ.
* 4 ಸಾವಿರದ ಗಡಿ ದಾಟಿ ಮುನ್ನುಗ್ಗುತ್ತಿರುವ ಸೋಂಕಿತರ ಸಂಖ್ಯೆ.
* ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿ 13ನೇ ದಿನಕ್ಕೆ ಕಾಲಿಟ್ಟಿದೆ.
* ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದೇಶದಲ್ಲೇ ಅತಿಹೆಚ್ಚು.
* ಕರ್ನಾಟಕದ ಮೂವರು ಮಹಿಳೆಯರಲ್ಲಿ ಸೋಂಕಿರುವುದು ಪತ್ತೆ.

ಶಾಸಕರಿಂದಲೇ ದಿಗ್ಭಂದನ ಉಲ್ಲಂಘನೆ
ದೇಶದಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದ್ದರೂ, ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಆರ್ವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಾದಾ ರಾವ್ ಕೆಚ್ಚೆ ಅವರು, ತಮ್ಮ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ದಿಗ್ಭಂದನ ನಿಯಮಗಳನ್ನು ಉಲ್ಲಂಘಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.
ತಮ್ಮ ನಿವಾಸದಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡ ಶಾಸಕರು, ನೂರಾರು ಜನರನ್ನು ಆಹ್ವಾನಿಸಿ, ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ತಿಲಾಂಜಲಿ ಹಾಡಿದ್ದಾರೆ.
ಆಹಾರ ಪದಾರ್ಥಗಳನ್ನು ಪಡೆಯಲು ಕಡುಬಡವರು, ಶಾಸಕರ ಮನೆಮುಂದೆ ಜಮಾಯಿಸಿದ್ದರು. ಸುದ್ದಿ ತಿಳಿದ ನಂತರ, ಪೊಲೀಸರು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಜನಜಂಗುಳಿಯನ್ನು ಚದುರಿಸಿದ್ದಾರೆ. +
ಶಾಸಕರ ಹುಟ್ಟುಹಬ್ಬದ ಸಂಭ್ರಮ ಮತ್ತು ಆಹಾರ ಧಾನ್ಯಗಳ ವಿತರಣೆ ಕುರಿತ ದೃಶ್ಯಗಳು ವೈರಲ್ ಆಗಿದ್ದು, ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.

Leave a Comment