ಕೊರೊನಾ ಸ್ಪೋಟ : ಸಂಖ್ಯೆ ಹೆಚ್ಚಳ – ಎರಡು ಗ್ರಾಮ ಪ್ರವೇಶ ನಿರ್ಬಂಧ

* 2455 ತಪಾಸಣೆ : ಫಲಿತಾಂಶ ನಿರೀಕ್ಷೆ – ಸಂಜೆ ಕಾದಿದೆ ಮಾರಿಹಬ್ಬ
ರಾಯಚೂರು.ಮೇ.24- ಒಂದೆಡೆ ತತ್ತರಿಸುವ ಬಿಸಿಲು, ಮತ್ತೊಂದೆಡೆ ಕೊರೊನಾ ಸ್ಪೋಟದಿಂದ ತಾಲೂಕಿನ ಎರಡು ಗ್ರಾಮಗಳ ಪ್ರವೇಶ ನಿರ್ಬಂಧ ಜನ ಜೀವನ ಅಸ್ತವ್ಯಸ್ತಕ್ಕೆ ದಾರಿ ಮಾಡಿದೆ.
ಮೇ.23 ರಂದು ಒಂದೇ ದಿನ 40 ಕೊರೊನಾ ಪಾಸಿಟಿವ್ ಪ್ರಕರಣಗಳಿಂದ ತತ್ತರಿಸಿದ ಜನ ಮುಂದೇನು ಗತಿ ಎನ್ನುವ ಕಳವಳಕ್ಕೀಡಾಗಿದ್ದಾರೆ. ಮಹಾರಾಷ್ಟ್ರದಿಂದ ಸುಮಾರು 3 ಸಾವಿರ ಜನ ಜಿಲ್ಲೆಯ ವಿವಿಧ ಕ್ವಾರಂಟೈನ್‌ಗಳಲ್ಲಿ ವಾಸವಾಗಿದ್ದಾರೆ. ಈಗಾಗಲೇ 66 ಮಹಾರಾಷ್ಟ್ರ ವಲಸಿಗರ ಪಾಸಿಟಿವ್ ಪ್ರಕರಣ ನಂತರ ಇಂದು ಸಂಜೆ ಇನ್ನೂ 8 ರಿಂದ 15 ಹೊಸ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಬಗ್ಗೆ ಮೂಲಗಳು ತಿಳಿಸಿವೆ.
ಗ್ರಾಮಾಂತರ ಪ್ರದೇಶಕ್ಕೂ ಕೊರೊನಾ ವಿಸ್ತರಣೆ ಆತಂಕ ಮತ್ತಷ್ಟು ಹೆಚ್ಚುವಂತೆ ಮಾ‌ಡಿದೆ. ನಗರದಿಂದ ಕೇವಲ 4 ಕಿ.ಮೀ.ಅಂತರದಲ್ಲಿರುವ ಮಲಿಯಾಬಾದ್ ಮತ್ತು 11 ಕಿ.ಮೀ. ಅಂತರದಲ್ಲಿರುವ ಸಿಂಗನೋಡಿಯಲ್ಲಿ ಕೊರೊನಾ ಪ್ರಕರಣ ಪತ್ತೆ ಈ ಎರಡು ಗ್ರಾಮಗಳನ್ನು ಜಿಲ್ಲಾಡಳಿತ ಕಂಟೋನ್ಮೆಂಟ್ ಜೋನ್ ಎಂದು ಘೋಷಿಸಿ, ಪ್ರವೇಶ ನಿರ್ಬಂಧಿಸಿದೆ. ಅತ್ಯಗತ್ಯ ಸಂದರ್ಭ ಹೊರತು ಪಡಿಸಿ, ಜನ ಸಂಚಾರ ನಡೆಸದಂತೆ ಆದೇಶಿಸಲಾಗಿದೆ.
ಕೊರೊನಾ ಆರಂಭಗೊಂಡಾಗಲಿಂದ ಇಂದಿನವರೆಗೂ ಜಿಲ್ಲೆಯಲ್ಲಿ ಕಂಟೋನ್ಮೆಂಟ್ ಜೋನ್ ಘೋಷಣೆಗೊಂಡಿರಲಿಲ್ಲ. ಆದರೆ, ನಿನ್ನೆ ಏಕಾಏಕಿ ಪ್ರಕರಣ ಹೆಚ್ಚಳದಿಂದ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಕಂಟೋನ್ಮೆಂಟ್ ಜೋನ್ ಘೋಷಿಸಿದೆ. ಮಲಿಯಾಬಾದ್ ಗ್ರಾಮದಲ್ಲಿ ಬಾಲಕಿಯೋರ್ವಳಿಗೆ ಕೊರೊನಾ ಪತ್ತೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ಬಾಲಕಿಗೆ ಕೊರೊನಾ ಸೋಂಕಿನ ಇತಿಹಾಸ ಗೊಂದಲಮಯವಾಗಿದ್ದರಿಂದ ಮಲಿಯಾಬಾದ್ ಗ್ರಾಮವನ್ನು ಕಂಟೋನ್ಮೆಂಟ್ ಜೋನ್‌ ಆಗಿ ಘೋಷಿಸಿ, ಮುಖ್ಯರಸ್ತೆ ಬ್ಯಾರಿಕೇಡ್ ಹಾಕುವ ಮೂಲಕ ಸಂಚಾರ ನಿರ್ಬಂಧಿಸಲಾಗಿದೆ.
ಸಿಂಗನೋಡಿ ಗ್ರಾಮದಲ್ಲಿ ಎರಡು ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ, ಅಲ್ಲಿಯೂ ಸಹ ಪೊಲೀಸ್ ಕಾವಲು ಬಿಗಿಗೊಳಿಸಲಾಗಿದೆ. ಕೊರೊನಾ ಪೀ‌ಡಿತರ ಮನೆಯ ಬಾಗಿಲಿಗೆ ಬೀಗ ಹಾಕಿ, ಕ್ವಾರಂಟೈನ್‌‌ನಲ್ಲಿ ಇರಿಸಲಾಗಿದೆ. ಮತ್ತೊಂದು ಕುಟುಂಬ ಊರಿನ ಆಚೆ ಹೊಲದಲ್ಲಿ ವಾಸ್ತವ್ಯ ಹೂಡಿದೆ. ಜಿಲ್ಲೆಯ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರಕ್ಕೆ ಸೇರಿರುವುದು ಈಗ ಮಹಾರಾಷ್ಟ್ರ ವಲಸಿಗರ ಮೇಲೆ ನಿಗಾ ಹೆಚ್ಚಿಸುವಂತೆ ಮಾಡಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಇನ್ನೂ 2455 ಮಾದರಿ ತಪಾಸಣೆ ವರದಿ ಬರಬೇಕಾಗಿದೆ. ಈಗಾಗಲೇ 8-15 ಪ್ರಕರಣಗಳು ಕೊರೊನಾ ಸೋಂಕು ದೃಢಗೊಳ್ಳುವ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ. ಸಂಜೆವರೆಗೆ ಜಿಲ್ಲೆಯಲ್ಲಿ ಮತ್ತೇಷ್ಟು ಪ್ರಕರಣಗಳು ಬಹಿರಂಗಗೊಳ್ಳುತ್ತವೆ ಎನ್ನುವ ಆತಂಕ ಜಿಲ್ಲಾಡಳಿತ ಮತ್ತು ಜನರನ್ನು ಕಾಡುವಂತೆ ಮಾಡಿದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಭಾರೀ ತಳಮಳ ಹೆಚ್ಚುವಂತೆ ಮಾಡಿದೆ. ಆದಿವಾರ ಲಾಕ್ ಡೌನ್‌ನಲ್ಲಿ ಬಹುತೇಕ ಜನರು ರಸ್ತೆಗಿಳಿಯದಿರುವುದು ಜನರ ಆತಂಕಕ್ಕೆ ನಿದರ್ಶನವಾಗಿತ್ತು. ಒಟ್ಟಾರೆಯಾಗಿ ಶೂನ್ಯ ಕೊರೊನಾ ಪ್ರದೇಶವೆಂದೂ ಗುರುತಿಸಿಕೊಂಡಿದ್ದ ಜಿಲ್ಲೆ ಈಗ ವೇಗವಾಗಿ ಕೊರೊನಾ ಕಬಂಧ ಬಾಹುವಿನ ಹಿಡಿತಕ್ಕೆ ಸಿಕ್ಕು, ಕೆಂಪು ವಲಯದತ್ತ ಸೆಳೆಯುತ್ತಿದೆ.

Share

Leave a Comment