ಕೊರೊನಾ ಸೋಂಕು ತಡೆಗೆ ಸಿಎಂ ನಿವಾಸದಲ್ಲೂ ಕಟ್ಟೆಚ್ಚರ

ಬೆಂಗಳೂರು, ಮಾ. ೧೫- ರಾಜ್ಯದಲ್ಲಿ ಕೊರೊನಾ ವೈರಸ್ ಹರಡದಂತೆ ಸರ್ಕಾರ ಹಲವು ಕ್ರಮಗಳನ್ನು ಜಾರಿಗೊಳಿಸಿರುವ ಬೆನ್ನಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿಗೆ ಬರುವವರಿಗೆ ಮತ್ತು ಅವರ ನಿವಾಸದಲ್ಲಿ ಕಾರ್ಯನಿರ್ವಹಿಸುವವರಿಗೆ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದ್ದು, ವಿದೇಶಿ ಗಣ್ಯರ ಭೇಟಿ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಭೇಟಿಗೆ ಅವಕಾಶ ನೀಡುವ ಕ್ರಮವನ್ನು ಜಾರಿಗೊಳಿಸಲಾಗಿದೆ.

ಕೊರೊನಾ ಸೋಂಕು ಹರಡದಂತೆ ತಡೆಯಲು ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದ್ದು, ಮುಖ್ಯಮಂತ್ರಿಗಳ ಭೇಟಿಗೆ ಬರುವ ಸಾರ್ವಜನಿಕರು, ಕಾರ್ಯಕರ್ತರು ಹಾಗೂ ರಾಜಕಾರಣಿಗಳು ಶೀತ, ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಮುಂತಾದ ರೋಗ ಲಕ್ಷಣಗಳನ್ನು ಹೊಂದಿದ್ದರೆ ಅಂತಹವರನ್ನು ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಮುಖ್ಯಮಂತ್ರಿಗಳ ಮನೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೂ ಶೀತ, ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಮುಂತಾದ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಅಂತಹ ಸಿಬ್ಬಂದಿಗೆ ರಜೆಯ ಮೇಲೆ ಕಳುಹಿಸಿ ಅವರ ಜಾಗಕ್ಕೆ ಬೇರೆ ಸಿಬ್ಬಂದಿಯನ್ನು ನಿಯೋಜಿಸುವಂತೆಯೂ ಸೂಚನೆ ನೀಡಲಾಗಿದೆ.

ಪ್ರವೇಶ ದ್ವಾರ, ನಿರೀಕ್ಷಣಾ ಕೊಠಡಿ ಮತ್ತು ಮನೆಯ ಒಳಗೆ ಜನ ಸೇರುವ ಕಡೆ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಇಟ್ಟು ಅವುಗಳನ್ನು ಬಳಸಲು ಮಾರ್ಗ ಸೂಚಿಯಲ್ಲಿ ಹೇಳಲಾಗಿದ್ದು, ಮುಖ್ಯಮಂತ್ರಿಗಳ ಮನೆಯ ಒಳಗಡೆ ಹೋಗುವ ಪ್ರತಿಯೊಬ್ಬರು ಹ್ಯಾಂಡ್ ಸ್ಯಾನಿಟೈಸರ್‌ಗಳಿಂದ ಕೈಗಳನ್ನು ಸ್ವಚ್ಛಗೊಳಿಸಿ ನಂತರ ಒಳಗೆ ಪ್ರವೇಶಿಸುವಂತೆಯೂ ತಿಳಿಸಲಾಗುತ್ತದೆ.

ಮನೆಯ ಆವರಣ ಮತ್ತು ಒಳಗೆ ಹೆಚ್ಚಿನ ಜನಸಂದಣಿ ಇರದಂತೆ ನೋಡಿಕೊಂಡು ಒಬ್ಬೊಬ್ಬರನ್ನೇ ಮುಖ್ಯಮಂತ್ರಿ ಭೇಟಿಗೆ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ. ಮನೆಯ ಪೀಠೋಪಕರಣಗಳು, ಬಾಗಿಲಿನ ಹಿಡಿಗಳು, ಟೇಬಲ್‌ಗಳನ್ನು ಸ್ಯಾನಿಟೈಸರ್ ಬಳಸಿ ಆಗಿಂದ್ದಾಗ್ಗೆ ಸ್ವಚ್ಛಗೊಳಿಸಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು, ವಿದೇಶದಿಂದ ಯಾವುದೇ ಗಣ್ಯರು ಮುಖ್ಯಮಂತ್ರಿ ಭೇಟಿಗೆ ಬಂದರೆ ಮಾಸ್ಕ್ ಧರಿಸಿದ ನಂತರವೇ ಭೇಟಿಗೆ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ.

ಯಾವುದೇ ವ್ಯಕ್ತಿಗಳು ಸೀನುವಾಗ, ಕೆಮ್ಮುವಾಗ, ಮೂಗು ಮತ್ತು ಬಾಯಿಯನ್ನು ಕರವಸ್ತ್ರದಿಂದ ಅಥವಾ ಟಿಶ್ಯು ಪೇಪರ್‌ನಿಂದ ಮುಚ್ಚಿಕೊಳ್ಳುವಂತೆಯೂ ಸಲಹೆ ನೀಡುವಂತೆ ಮುಖ್ಯಮಂತ್ರಿ ನಿವಾಸ ಮತ್ತು ಕಚೇರಿ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

Leave a Comment