ಕೊರೊನಾ ಸೋಂಕಿಗೆ ಕಡಿವಾಣ : ಕಲಬುರಗಿ ಮಾದರಿ

 

ಕಲಬುರಗಿ,ಏ.3-ಕೊರೊನಾ ಸೋಂಕಿಗೆ 76 ವರ್ಷದ ವೃದ್ಧ ಮೊದಲ ಬಲಿಯಾಗುವುದರ ಮೂಲಕ ಇಡೀ ದೇಶದಲ್ಲಿಯೇ ತಲ್ಲಣ, ಆತಂಕ ಸೃಷ್ಟಿಯಾಗಲು ಕಾರಣವಾಗಿದ್ದ ಕಲಬುರಗಿ ಈಗ ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯುವಲ್ಲಿ ಯಶಸ್ವಿಯಾವುದರ ಮೂಲಕ ದೇಶದ ಗಮನ ಸೆಳೆದಿದೆ.

ಜಿಲ್ಲಾಡಳಿತ ಅದರಲ್ಲೂ ವಿಶೇಷವಾಗಿ ಜಿಲ್ಲಾಧಿಕಾರಿ ಶರತ್ ಬಿ.ಮತ್ತವರ ತಂಡ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳೇ ಕಲಬುರಗಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಸಾಧ್ಯವಾಗಿದೆ ಎಂಬ ಮೆಚ್ಚುಗೆಯ ಮಾತುಗಳೀಗ ಎಲ್ಲೆಡೆ ಕೇಳಿ ಬರುತ್ತಿದ್ದು, ಜಿಲ್ಲಾಧಿಕಾರಿಗಳ ಕ್ರಮಕ್ಕೆ ಸರ್ಕಾರದ ಮುಖ್ಯಕಾರ್ಯದರ್ಶಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದು ಗಮನಾರ್ಹ ಸಂಗತಿಯಾಗಿದೆ.

ಸೌದಿ ಅರೇಬಿಯಾದಿಂದ ನಗರಕ್ಕೆ ಆಗಮಿಸಿದ್ದ 76 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟ ಸುದ್ದಿ ಕಲಬುರಗಿಯಲ್ಲಿ ಮಾತ್ರವಲ್ಲ ಇಡೀ ದೇಶಾದ್ಯಂತ ತಲ್ಲಣವನ್ನೇ ಸೃಷ್ಟಿಸಿತ್ತು. ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು ಖಾತ್ರಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮೊದಲು ಮಾಡಿದ ಕೆಲಸವೇ  ವೃದ್ಧ ವಾಸಿಸುತ್ತಿದ್ದ ವಾರ್ಡ್ ನ್ನು ಸಂಪೂರ್ಣವಾಗಿ ಕಂಟೇನ್ ಮೆಂಟ್ ಝೋನ್ (ನಿರ್ಬಂಧಿತ ಪ್ರದೇಶ) ಎಂದು ಘೋಷಿಸಿ ಈ ವಾರ್ಡ್ ನಿಂದ ಯಾರೂ ಹೊರಗೆ ಮತ್ತು ವಾರ್ಡ್ ಒಳಗೆ ಪ್ರವೇಶಿಸಿದಂತೆ ನಿರ್ಬಂಧ ಹೇರುವುದರ ಮೂಲಕ ಸೋಂಕು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಿತು. ಅಲ್ಲದೆ ವೃದ್ಧನ ಕುಟುಂಬದವರು, ಆತನ ಸಂಪರ್ಕಕ್ಕೆ ಬಂದವರು ಮತ್ತು ಎರಡನೇ ಸಂಪರ್ಕದಲ್ಲಿದ್ದವರ ಆರೋಗ್ಯ ತಪಾಸಣೆ ನಡೆಸಿ ಕೊರೊನಾ ಸೋಂಕಿನ ಲಕ್ಷಣ ಕಂಡುವರನ್ನು ತಕ್ಷಣವೇ ನಗರದ ಇಎಸ್ಐಸಿ ಐಸೋಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡುವುದರ ಮೂಲಕ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯೊಡ್ಡಿತು. ಅಲ್ಲದೆ ಜಿಲ್ಲೆಯಾದ್ಯಂತ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸುವುದರ ಮೂಲಕ, ಜಾತ್ರೆ, ಸಭೆ, ಸಮಾರಂಭ, ಮದುವೆ, ಮುಂಜಿಯಂತಹ ಕಾರ್ಯಕ್ರಮಗಳನ್ನು ನಿಷೇಧಿಸಿತು. ಸುಪ್ರಸಿದ್ಧ ಶರಣಬಸವೇಶ್ವರ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮದಲ್ಲಿ ಪ್ರತಿವರ್ಷ ಲಕ್ಷಾಂತರ ಜನ ಭಾಗವಹಿಸುತ್ತಿದ್ದರೂ, ಜಾತ್ರಾ ಮಹೋತ್ಸವವನ್ನೇ ರದ್ದುಪಡಿಸುವುದರ ಮೂಲಕ, ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ನಾಕಾಬಂಧಿ ಮಾಡುವುದರ ಮೂಲಕ ಸೋಂಕು ಹರಡುವುದನ್ನು ತಡೆಯಿತು. ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯುವಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೊಗೊಂಡ ಜಿಲ್ಲಾಧಿಕಾರಿ ಬಿ.ಶರತ್ ಅವರು, ನಗರದಲ್ಲಿನ ಎಲ್ಲಾ ಬಾರ್ ಮತ್ತು ರೆಸ್ಟೋರಂಟ್, ಮಾಲ್, ಸಿನೆಮಾ ಮಂದಿರ, ಹೋಟೆಲ್ ಗಳನ್ನು ಬಂದ್ ಮಾಡುವುದರ ಮೂಲಕ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವುದರ ಮೂಲಕ, ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಕಲಬುರಗಿಯಿಂದ ಜನ ಹೊರ ಹೋಗುವುದನ್ನು ಮತ್ತು ಒಳ ಬರುವುದನ್ನು ತಡೆಯುವುದರ ಮೂಲಕ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ವಿಯಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂವನ್ನು ಯಶಸ್ವಿಗೊಳಿಸಿದ್ದಲ್ಲದೆ, ಲಾಕ್ ಡೌನ್ ನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಮೂಲಕ ಜನರ ಓಡಾಟಕ್ಕೆ ಸಂಪೂರ್ಣವಾಗಿ ಬ್ರೆಕ್ ಹಾಕಿದರು. ಜನ ಅನಗತ್ಯವಾಗಿ ರಸ್ತೆ ಮೇಲೆ ಓಡಾಡತಂತೆ ತಡೆಯಲು ಒಂದು ದಿನ ಪೆಟ್ರೋಲ್ ಬಂಕ್ ನ್ನು ಸಹ ಬಂದ್ ಮಾಡಿದ್ದರು.

ಕಲಬುರಗಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧ ಸೇರಿದಂತೆ ಇದುವರೆಗೆ ಐವರಿಗೆ ಮಾತ್ರ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದ್ದು, ಇನ್ನುಳಿದಂತೆ 148 ಪ್ರಕರಣಗಳಲ್ಲಿ 104 ಪ್ರಕರಣಗಳ ವರದಿ ನೆಗೆಟಿವ್ ಬಂದಿರುವುದು ಸಮಾಧಾನ ತಂದಿದೆ.

ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ 14 ಜರನ್ನು ಪತ್ತೆ ಹಚ್ಚಿ ಅವರೆಲ್ಲರನ್ನು ಹೋಂಕ್ವಾರಂಟೈನ್ ನಲ್ಲಿಡಲಾಗಿದ್ದು, ಅದರಲ್ಲಿ ಓರ್ವ ವ್ಯಕ್ತಿಯ ಪತ್ನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದ್ದರೂ ಅವರನ್ನು ನಗರದ ಇಎಸ್ಐಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟಾರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಸೋಂಕಿನಿಂದ ಮೊದಲ ಬಲಿಯಾದ ಕಲಬುರಗಿಯಲ್ಲಿ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯುವಲ್ಲಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಕೈಗೊಂಡ ಕಠಿಣ ಕ್ರಮಗಳೇ ಕಾರಣ ಅನ್ನುವುದರಲ್ಲಿ ಎರಡು ಮಾತಿಲ್ಲ.

Leave a Comment