ಕೊರೊನಾ : ಸರಳ ಮದುವೆ – ದಂದು ವೆಚ್ಚಕ್ಕೆ ಕಡಿವಾಣ

ರಾಯಚೂರು.ಮೇ.24- ಕೊರೊನಾ ವೈರಸ್ ಪರಿಣಾಮ ಸಾಂಪ್ರದಾಯಿಕ ಆಚರಣೆಗಳು ಸಂಪೂರ್ಣ ಬದಲಿಸಿಕೊಂಡ ಜನ ಸಾಮಾಜಿಕ ಅಂತರದ ಮೂಲಕ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇದಕ್ಕೆ ಜಿಲ್ಲೆಯಲ್ಲಿ ಇಂದು ನಡೆದ ನೂರಾರು ಮದುವೆಗಳು ಸಾಕ್ಷಿಯಾಗಿದ್ದವು.
ಮದುವೆ ಮನೆಯಲ್ಲಿ ಸಡಗರ, ಸಂಭ್ರಮ, ನೂರಾರು ಜನರ ಓಡಾಟ, ಮೈಕ್ ಮತ್ತು ವಾದ್ಯಗಳ ಸದ್ದು ಮರೆಯಾಗಿ ಕೇವಲ ಬೆರಳೆಣಿಕೆಯ ಜನರು ಮಾತ್ರ ಮದುವೆ ಕಾರ್ಯಕ್ರಮ ಮುಗಿಸುವ ಮೂಲಕ ಭಾರತೀಯ ಪರಂಪರೆಯಲ್ಲಿ ಹೀಗೂ ಮದುವೆ ಮಾಡಬಹುದು ಎನ್ನುವ ಹೊಸ ವಿಧಾನವನ್ನು ಆಚರಿಸಲಾಗುತ್ತಿದೆ. ಕೊರೊನಾ ಉಳ್ಳವರು, ಇಲ್ಲದವರಿಗೆ ಎಲ್ಲರೂ ಒಂದೇ ರೀತಿಯ ಮದುವೆ ಕಾರ್ಯಕ್ರಮ ನಿರ್ವಹಿಸುವಂತಹ ಅನಿವಾರ್ಯತೆ ನಿರ್ಮಿಸಿದೆ.
ಅದ್ಧೂರಿ ಸಮಾರಂಭಗಳ ಹಿನ್ನೆಲೆಯಲ್ಲಿ `ಹುಚ್ಚರ ಮದುವೆಯಲ್ಲಿ ಉಂಡವರೇ ಜಾಣ` ಎನ್ನುವ ಗಾದೆ ಹುಟ್ಟುವುದಕ್ಕೆ ಕಾರಣವಾಗಿತ್ತು. ಆದರೆ, ಇಂದು ಉಣ್ಣಲು ಅವಕಾಶವಿಲ್ಲದ ರೀತಿಯಲ್ಲಿ ಒಂದು ಘಂಟೆಯಲ್ಲಿ ಮದುವೆ ಸಂಪೂರ್ಣ ಮುಗಿಸುವ ವಿನೂತನ ಪದ್ಧತಿ ಸದ್ದಿಲ್ಲದೇ ಆಚರಣೆಗೆ ಬಂದಿದೆ.
ಮದುವೆ ಸಮಾರಂಭಗಳನ್ನು ಸರಳವಾಗಿ ಆಚರಿಸಲು ಏನೆಲ್ಲಾ ಜಾಗೃತಿ ಕಾರ್ಯಕ್ರಮ ಕೈಗೊಂಡರೂ ಇದಕ್ಕೆ ಕಿವಿಗೊಡದ ಜನ ಲಕ್ಷ, ಕೋಟಿ ವೆಚ್ಚದಲ್ಲಿ ಮದುವೆ ಕಾರ್ಯಕ್ರಮ ನಿರ್ವಹಿಸಲಾಗುತ್ತಿತ್ತು. ಪ್ರತಿಷ್ಠೆಗೆ ಬಿದ್ದು, ಆಮಂತ್ರಣ ಪತ್ರ ಮುದ್ರಿಸಿ, ಸಾವಿರಾರು ಸಂಖ್ಯೆಯ ಜನರನ್ನು ಸೇರಿಸುವ ಮೂಲಕ ತಮ್ಮ ವರ್ಚಸ್ಸು ಸಾರುವುದಕ್ಕೆ ವೇದಿಕೆಯಾಗಿಸಿಕೊಂಡಿದ್ದರು.
ಆದರೆ, ಕೊರೊನಾ ಈ ಮದುವೆ ಸ್ಪರ್ಧೆಗೆ ಕಡಿವಾಣ ಹಾಕಿದೆ. ಸರಳ ಮದುವೆ ಮೂಲಕ ಆರೋಗ್ಯ ಕಾಯ್ದುಕೊಳ್ಳುವುದಲ್ಲದೇ, ಆರ್ಥಿಕ ದುಂದು ವೆಚ್ಚ ತಡೆಯುವಲ್ಲಿ ಯಶಸ್ವಿಯಾಗಿದೆ. ನಗರದಲ್ಲಿಂದು ಒಟ್ಟು 28 ಮದುವೆಗಳು ಪರವಾನಿಗೆಯೊಂದಿಗೆ ನಡೆಸಲಾಯಿತು. ಗರಿಷ್ಟ 50 ಜನರ ಮಿತಿಯಲ್ಲಿ ಮದುವೆ ಕಾರ್ಯಕ್ರಮ ನಿರ್ವಹಿಸಲಾಯಿತು.
ಮದುವೆ ಕಾರ್ಯಕ್ರಮಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಪರವಾನಿಗೆ ಕಡ್ಡಾಯಗೊಳಿಸಿದ್ದರಿಂದ ಷರತ್ತು ಬದ್ಧ ಮದುವೆ ಮಾಸ್ಕ್, ಸ್ಯಾನಿಟೈಸರ್ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಲಾಯಿತು. ಕೊರೊನಾ ಜನರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮಕ್ಕೆ ಎಡೆ ಮಾಡಿದ್ದರೂ, ಮತ್ತೊಂದೆಡೆ ಸಾಮಾಜಿಕ ಅಂತರ ಮತ್ತು ದುಂದು ವೆಚ್ಚ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎನ್ನುವುದು ಮಾತ್ರ ಅಲ್ಲಗಳೆಯಲಾಗುವುದು.

Share

Leave a Comment