ಕೊರೊನಾ ಶಂಕಿತ ಹನ್ನೊಂದು ಜನರು ವಶಕ್ಕೆ ಭಯಭೀತರಾದ ನವಲಗುಂದ ಜನತೆ

ನವಲಗುಂದ,ಏ2- ಕೊರೊನಾ ಕರ್ಫ್ಯೂನಿಂದಾಗಿ ಇನ್ನೇನು ಪಟ್ಟಣ ಹತೋಟಿಗೆ ಬಂತೆಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿಯೇ ದೆಹಲಿಯ ನಿಜಾಮುದ್ದೀನ ಮರ್ಕಜ್‍ಗ ಮಸೀದಿಯಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದ ಕೊರೊನಾ ಶಂಕೀತರನ್ನು ಒಬ್ಬೊಬ್ಬರನ್ನಾಗಿ ಹನ್ನೊಂದು ಶಂಕೀತರನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮಂಗಳವಾರ ತಾಲ್ಲೂಕಾ ಆಡಳಿತ ಐವರನ್ನು ವಶಕ್ಕೆ ಪಡೆದು ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಿದ್ದರು. ಬುಧವಾರ ಮತ್ತೇ ಆರು ಶಂಕಿತರನ್ನು ವಶಕ್ಕೆ ಪಡೆದು ಕಿಮ್ಸಗೆ ಕಳುಹಿಸಿಕೊಟ್ಟ ಸುದ್ದಿ ತಿಳಿದ ತಾಲ್ಲೂಕಿನ ಜನರು ಮನೆಯಿಂದ ಹೊರಬರದೇ ಅಂಜಿಕೆಯಿಂದಲೇ ಕಾಲ ಕಳೆಯುವಂತಾಗಿದೆ. ಮಾರ್ಚ 13 ರಂದೇ ದೆಹಲಿಯಿಂದ ಹುಬ್ಬಳ್ಳಿ ನಗರಕ್ಕೆ ನಿಜಾಮುದ್ದೀನ ಟ್ರೈನಿನಲ್ಲಿ ಆಗಮಿಸಿದ್ದ ಇವರು ಹುಬ್ಬಳ್ಳಿ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಪಟ್ಟಣಕ್ಕೆ ಆಗಮಿಸಿ ನಂತರ ಪಟ್ಟಣ ಹಾಗೂ ಗ್ರಾಮಗಳಲ್ಲಿ ಸಂಚರಿಸಿದ್ದಾರೆ.
ಸಂಬಂಧಿಕರ ಮನೆಗಳಿಗೆ ತೆರಳಿ ಉಭಯ ಕುಶಲೋಪಹರಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಶಂಕಿತನೊಬ್ಬ ಪಟ್ಟಣದಲ್ಲಿ ತರಕಾರಿ ಮಾರಾಟ ಮಾಡಿದ್ದಾನೆಂದು ತಿಳಿಯುತ್ತಿದ್ದಂತೆಯೇ ಎಲ್ಲರಲ್ಲಿಯು ಹೆಚ್ಚಿನ ಭಯ ಶುರುವಾಗಿದ್ದು ತರಕಾರಿ ಖರೀದಿಸಲು ಕೂಡ ಹಿಂಜರಿಕೆ ಮಾಡುತ್ತಿದ್ದಾರೆ. ಶಂಕಿತರ ಪತ್ತೇ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ, ಸಿಪಿಐ ಮಠಪತಿ, ಪಿ.ಎಸ್.ಐ ಜಯಪಾಲ ಪಾಟೀಲ ತೊಡಗಿಕೊಂಡಿದ್ದಾರೆ.
@10nc = ಶಾಸಕ ಮುನೇನಕೊಪ್ಪ ಭೇಟಿ- ಸಾಂತ್ವನ
ನವಲಗುಂದದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಬುಧವಾರ ಮಧ್ಯಾಹ್ನ ದೌಡಾಯಿಸಿ ಶಂಕಿತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಿಮ್ಮೊಂದಿಗೆ ತಾಲ್ಲೂಕಾ ಆಡಳಿತವೇ ಟೊಂಕ ಕಟ್ಟಿ ನಿಂತಿದೆ. ಕುಟುಂಬಸ್ಥರು, ಅಕ್ಕ ಪಕ್ಕದ ಜನರು ಯಾರು ಭಯ ಪಡುವ ಅವಶ್ಯಕತೆಯಿಲ್ಲ, ಎಲ್ಲರೂ ಜಾಗೃತರಾಗಿದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಧೈರ್ಯದಿಂದ ಇರಬೇಕೆಂದು ಹೇಳಿದರು. ಅಷ್ಟೇ ಅಲ್ಲದೇ ದೆಹಲಿಗೆ ಹೋಗಿ ಬಂದವರು ಇನ್ನೇಷ್ಟು ಜನ ಇದ್ದಾರೆಂದು ಪ್ರಶ್ನಿಸುತ್ತಿದ್ದಂತೆಯೇ ಶಂಕಿತನೊಬ್ಬ ನಾವು ಒಟ್ಟು 15 ಜನ ಸೇರಿ ಜಲಾನಿ ಬೇಪಾರಿ ಎಂಬವರ ನೇತೃತ್ವ  ದೆಹಲಿಗೆ ಹೋಗಿ ಬಂದಿದ್ದೇವೆಂದು ಹೇಳುತ್ತಿದ್ದಂತೆಯೇ ಗಾಬರಿಗೊಂಡ ಶಾಸಕರು ಇನ್ನೇಷ್ಟು ಜನ ಇದ್ದಾರೆಂದು ತಕ್ಷಣವೇ ಪತ್ತೆ ಹಚ್ಚುವಂತೆ ತಹಶೀಲ್ದಾರ್ ಹಾಗೂ ಪೊಲೀಸರಿಗೆ ಸೂಚನೆ ನೀಡಿದರು. ಎಲ್ಲಿವರೆಗೆ ಒಟ್ಟು ಹನ್ನೊಂದು ಜನರನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರಾವಾನಿಸಿದ್ದಾರೆ. ವೈದ್ಯರು ಶಂಕೀತರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ತೆಗೆದುಕೊಂಡಿದ್ದು 14 ದಿನ ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿರಲು ಸೂಚನೆ ನೀಡಿದ್ದಾರೆ.
ತಾಲ್ಲೂಕಾ ಆಡಳಿತದವರು ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಹತೋಟಿಗೆ ತಂದಿದ್ದರು. ಜನರ ಮೆಚ್ಚುಗೆಗೂ ಪಾತ್ರರಾಗಿದ್ದರು. ಆದರೆ ನವಲಗುಂದ ತಾಲ್ಲೂಕಿನಿಂದ ಹೆಚ್ಚು ಜನರು ದೆಹಲಿಗೆ ಹೋಗಿ ಬಂದಿದ್ದಾರೆಂದು ತಿಳಿಯುತ್ತಿದ್ದಂತೆಯೇ ತಾಲ್ಲೂಕಾ ಆಡಳಿತವೇ ಹೌಹಾರಿದ್ದು ಪತ್ತೇ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲ ಶಂಕಿತರನ್ನು ಆದಷ್ಟು ಬೇಗನೆ ಪತ್ತೆ ಹಚ್ಚುತ್ತೇವೆ ಜನರು ಆತಂಕಕ್ಕೆ ಒಳಗಾಗಬಾರದೆಂದು ತಹಶೀಲ್ದಾರ್ ನವೀನ ಹುಲ್ಲೂರ ಜನರಲ್ಲಿ ಮನವಿ ಮಾಡಿದ್ದಾರೆ. ತಾಲ್ಲೂಕಾ ಪಂಚಾಯ್ತಿ ಇ.ಓ ಪವಿತ್ರಾ ಪಾಟೀಲ, ಮುಖ್ಯಾಧಿಕಾರಿ ಖುದಾನವರ ಜಿಲ್ಲಾ ಪಂಚಾಯತ ಸದ್ಯಸ ಎ ಬಿ ಹಿರೇಮಠ ಉಪಸ್ಥಿತರಿದ್ದರು.

Leave a Comment