ಕೊರೊನಾ ವಿರುದ್ಧ ಸಮರ ನಮೋ ಕರೆ : ಒಗ್ಗಟ್ಟಿನಿಂದ ಹೋರಾಡಿ ಸಂಕಷ್ಟದಿಂದ ದೇಶ ರಕ್ಷಿಸಲು ಮನವಿ

ನವದೆಹಲಿ, ಏ. ೬- ದೇಶದಲ್ಲಿ ತನ್ನ ಕಬಂಧಬಾಹು ಚಾಚಿರುವ ಮಾರಣಾಂತಿಕ ಕೊರೊನಾ ಸೋಂಕಿನ ವಿರುದ್ದ ಸುದೀರ್ಘ ಹೋರಾಟ ನಡೆಸಬೇಕಾಗಿದ್ದು, ಯಾವುದೇ ಕಾರಣಕ್ಕೂ ದೇಶದ ಜನ ವಿಶ್ರಮಿಸದೆ ನಿರಂತರವಾಗಿ ಹೋರಾಟ ನಡೆಸಿದಾಗ ಮಾತ್ರ ಜಯದ ಮಾಲೆ ಧರಿಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರಮೋದಿ ರಾಷ್ಟ್ರದ ಜನತೆಯನ್ನು ಹುರಿದುಂಬಿಸಿದ್ದಾರೆ.

  • ಬಿಜೆಪಿ ಕಾರ್ಯಕರ್ತರಿಗೆ ಪಂಚ ಸಂದೇಶ
  • ದೇಶದಲ್ಲಿ ಯಾರೂ ಸಹ ಹಸಿವಿನಿಂದ ಇರಬಾರದು. ಬಿಜೆಪಿ ಕಾರ್ಯಕರ್ತರು ಬಡ ಜನರಿಗೆ ಪಡಿತರ ತಲುಪಿಸುವ ಅವಿರತ ಕೆಲಸ ಮಾಡಬೇಕಾಗಿದೆ.
  •  ಬಡ ಜನರಿಗೆ ಹಾಗೂ ಅಗತ್ಯವಿರುವವರಿಗೆ ಮಾಸ್ಕ್ ವಿತರಿಸುವುದು.
  •  ಕೊರೊನಾ ವಿರುದ್ಧ ಅವಿರತವಾಗಿ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೊಲೀಸರು, ಅಗತ್ಯ ಸರಕು ಸೇವೆ ಒದಗಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸುವುದು.
  •  ಕೊರೊನಾ ಬಗ್ಗೆ ಸಮಗ್ರ ಮಾಹಿತಿ ನೀಡುವ ಆರೋಗ್ಯ ಸೇತು ಮೊಬೈಲ್ ಆಪ್‌ನ್ನು ಎಲ್ಲ ಕಾರ್ಯಕರ್ತರು ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಲು ಸಲಹೆ.
  •  ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ಕೇರ್ ಫಂಡ್‌ಗೆ ದೇಣಿಗೆ ನೀಡಲು ಜನರಿಗೆ ಮಾಹಿತಿ ತಲುಪಿಸಲು ಸಲಹೆ.

ಮಹಾಮಾರಿ ಕೊರೊನಾ ವಿರುದ್ಧದ ಸಮರದಲ್ಲಿ ಇಡೀ ದೇಶವೇ ಒಗ್ಗಟ್ಟಾಗಿ ಹೋರಾಟ ಮಾಡಿ ಗುರಿ ಸಾಧಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಕೊರೊನಾ ವಿರುದ್ಧ ಸಮರದಲ್ಲಿ 9 ಗಂಟೆಯಿಂದ 9 ನಿಮಿಷದವರೆಗೆ ತಮ್ಮ ಮನೆಯಲ್ಲಿ ಲೈಟ್ ಆಫ್ ಮಾಡಿ ದೀಪ ಬೆಳಗಿಸುವಂತೆ ಪ್ರಧಾನಿ ಕರೆಗೆ ಇಡೀ ದೇಶವೇ ಅಭೂತಪೂರ್ವ ಬೆಂಬಲ ಸೂಚಿಸಿತ್ತು.

ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ದೆಹಲಿಯ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಕಚೇರಿಯಲ್ಲಿ ಭಾಷಣ ಮಾಡಿದ ನರೇಂದ್ರಮೋದಿ, ಮಾರಕ ಕೊರೊನಾ ವಿರುದ್ಧ ಹೋರಾಟ ನನ್ನೊಬ್ಬನ ಹೋರಾಟವಲ್ಲ. ದೇಶದ 130 ಕೋಟಿ ಜನತೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ದೇಶ ಮುಖ್ಯ, ಅನಂತರ ನಮ್ಮ ಪಕ್ಷ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿರುವ ಅವರು, ಭಾರತ ದೇಶವೆಂದರೆ 130 ಕೋಟಿ ಜನರ ಮನೆಯಂತೆ ಭಾವಿಸುವಂತೆ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ದೇಶದಲ್ಲಿ ಕೊರೊನಾ ಹೆಮ್ಮಾರಿ ದಿನದಿಂದ ದಿನಕ್ಕೆ ತನ್ನ ರೌದ್ರಾವತಾರ ಮುಂದುವರೆಸಿದ್ದು, ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಿದೆ. ಕೇವಲ ನಮ್ಮ ದೇಶಮಾತ್ರವಲ್ಲ, ನೆರೆ-ಹೊರೆಯ ರಾಷ್ಟ್ರಗಳು ಕೊರೊನಾ ರೌದ್ರಾವತಾರಕ್ಕೆ ನಲುಗಿವೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಹೆಚ್ಚು ಸದೃಢರಾಗಿ ಕಾರ್ಯನಿರ್ವಹಿಸಬೇಕು. ಕೊರೊನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಗ್ಗಟ್ಟಾಗಿ ದುಡಿಯಬೇಕಾಗಿದೆ ಎಂದು ಕರೆ ಕೊಟ್ಟರು.
ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತ ಕೈಗೊಂಡಿರುವ ಕ್ರಮಗಳನ್ನು ವಿಶ್ವಆರೋಗ್ಯ ಸಂಘಟನೆ ಶ್ಲಾಘಿಸಿದೆ. ಹಲವು ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿದೆ.

ಕೊರೊನಾಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಜಗತ್ತಿನ ಹಲವು ಧುರೀಣರ ಜತೆ ಸಮಾಲೋಚನೆ ನಡೆಸಿದ್ದೇನೆ. ಪಕ್ಷದ ಕಾರ್ಯಕರ್ತರಿಗೆ ಸೇವೆ ಎಷ್ಟು ಮುಖ್ಯವೋ ಮಾನವೀಯತೆಯ ಸೇವೆಯು ಅಷ್ಟೇ ಮುಖ್ಯವಾಗಿದೆ ಎಂದರು.

ದೇಶದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜತೆಗೆ ದೇಶದ ರಕ್ಷಣೆಯಲ್ಲೂ ತೊಡಗಿದ್ದಾರೆ. ಗ್ರಾಮಗಳಿಂದ ಹಿಡಿದು ನಗರ ಪ್ರದೇಶದ ಜನರು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ ಎಂದರು.ಜನತಾ ಕರ್ಫ್ಯೂ, ಲಾಕ್‌ಡೌನ್‌ಗೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇದಕ್ಕಾಗಿ ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನರೇಂದ್ರಮೋದಿ ಹೇಳಿದರು.

 

Leave a Comment