ಕೊರೊನಾ ಮೃತ ವ್ಯಕ್ತಿಗೆ 3 ಪತ್ನಿಯರು, 21 ಮಂದಿ ಮಕ್ಕಳು!

ತುಮಕೂರು, ಮಾ. ೨೭- ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಸೋಂಕಿಗೆ ಕಲ್ಪತರುನಾಡಿನಲ್ಲಿ 65 ವರ್ಷದ ವೃದ್ದನೋರ್ವ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ವೃದ್ಧ ಸಿರಾ ನಗರ ವಾಸಿಯಾಗಿದ್ದು, ಈತನ ರಕ್ತ, ಗಂಟಲು ದ್ರವ ಮಾದರಿಯ ವರದಿಯೂ ಇಂದು ಬಂದಿದ್ದು, ಈತನಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಇಂದಿಲ್ಲಿ ತಿಳಿಸಿದರು.
ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಪೇಷೆಂಟ್ ನಂ-56 (P-56) ವೃದ್ಧ ಮಾ. 5 ರಂದು ತುಮಕೂರಿನಿಂದ ಸಂಪರ್ಕ ಕ್ರಾಂತಿ ಎಕ್ಸಪ್ರೆಸ್ ರೈಲಿನ ಮುಖಾಂತರ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈತನ ಜತೆ ಇತರೆ 13 ಮಂದಿಯು ಸಹ ದೆಹಲಿಗೆ ಪ್ರಯಾಣ ಮಾಡಿದ್ದರು. ಇವರೆಲ್ಲ ಮಾ. 7 ರಂದು ದೆಹಲಿಯ ನಿಜಾಮುದ್ದೀನ್ ನಿಲ್ದಾಣದಲ್ಲಿ ಇಳಿದು ದೆಹಲಿಯ ಜಾಮೀಯ ಮಸೀದಿಯಲ್ಲಿ ಏರ್ಪಟ್ಟಿದ್ದ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದರು ಎಂದು ಅವರು ಮಾಹಿತಿ ನೀಡಿದರು.
ಜಾಮೀಯಾ ಮಸೀದಿಯಲ್ಲಿ ಕಾನ್ಫರೆನ್ಸ್ ಮುಗಿಸಿಕೊಂಡ ಬಳಿಕ ಇವರೆಲ್ಲ ಮಾ. 9 ರಂದು ರೈಲಿನಲ್ಲಿ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಮಾ. 11 ರಂದು ಬಂದಿಳಿದರು. ಮತ್ತೆ ಯಶವಂತಪುರದಿಂದ ಚಿತ್ರದುರ್ಗಕ್ಕೆ ಹೊರಟ್ಟಿದ್ದ ಬಸ್‌ನಲ್ಲಿ ಸಿರಾ ನಗರಕ್ಕೆ ಪ್ರಯಾಣ ಬೆಳೆಸಿದ್ದರು.
ಇದಾದ ಬಳಿಕ ಮಾ. 18 ರಂದು ಸದರಿ ವೃದ್ಧನಿಗೆ ಜ್ವರ ಬಂದಿದೆ. ಆಗ ಸಿರಾದ ಸ್ಥಳೀಯ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜ್ವರ ಕಡಿಮೆಯಾಗದೇ ಇದ್ದಾಗ ಮತ್ತೆ ಮಾ. 21 ರಂದು ಖಾಸಗಿ ಆಸ್ಪತ್ರೆಯಲ್ಲಿ ಎಕ್ಸ್‌ರೇ ಮಾಡಿಸಿಕೊಂಡು ಚಿಕಿತ್ಸೆ ಪಡೆದಿದ್ದಾರೆ. ಅಲ್ಲೂ ಸಹ ಗುಣಮುಖವಾಗದ ಹಿನ್ನೆಲೆಯಲ್ಲಿ ಮಾ. 23 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಅಂದೇ ಆಸ್ಪತ್ರೆಯಿಂದ ಮನೆಗೆ ಹೋಗಿದ್ದರು. ಮತ್ತೆ ಜ್ವರದ ಬಾಧೆ ಜಾಸ್ತಿಯಾದ್ದರಿಂದ
ಮಾ. 24 ರಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ಜಿಲ್ಲಾಸ್ಪತ್ರೆಗೆ ಬಂದು ದಾಖಲಾದರು. ತಕ್ಷಣ ಇವರನ್ನು ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಿ ರಕ್ತದ ಮಾದರಿ, ಗಂಟಲು ದ್ರವದ ಮಾದರಿಯನ್ನು ಪಡೆದು ಪರೀಕ್ಷೆಗಾಗಿ ಕಳುಹಿಸಲಾಗಿತ್ತು ಎಂದು ಅವರು ವಿವರಿಸಿದರು.
ಮೃತಪಟ್ಟಿರುವ ವೃದ್ಧ ಕೊನೆ ಗಳಿಗೆವರೆಗೂ ಚಿಕಿತ್ಸೆ ಸ್ಪಂದಿಸುತ್ತಿದ್ದರು. ಆದರೆ ಇಂದು ಬೆಳಿಗ್ಗೆ 10.45 ರಲ್ಲಿ ಸಾವನ್ನಪ್ಪಿದ್ದು, ಇವರಿಗೆ ಕೊರೊನಾ ಸೋಂಕು ತಗುಲಿರುವುದು ಅವರ ರಕ್ತದ ಮಾದರಿ, ಗಂಟಲು ದ್ರವದ ಮಾದರಿ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ ಎಂದು ಅವರು ಪುನರುಚ್ಚರಿಸಿದರು.
ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿರುವ ವೃದ್ಧನ ಮನೆಯಲ್ಲಿ 21 ಜನ ಇದ್ದು, ಇವರೆಲ್ಲರನ್ನು ಐಸೋಲೇಷನ್ ಮಾಡಿದ್ದು, ಈಗಾಗಲೇ 8 ಮಂದಿಯ ರಕ್ತದ ಮಾದರಿ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಉಳಿದವರ ಪರೀಕ್ಷಾ ವರದಿ ಬರಬೇಕಿದೆ. 8 ಮಂದಿಯನ್ನು ಸಿರಾ ಆಸ್ಪತ್ರೆಯಲ್ಲೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಉಳಿದವರನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ಇನ್ನು ಮೃತ ವೃದ್ಧನೊಂದಿಗೆ ದೆಹಲಿಗೆ ಪ್ರಯಾಣಿಸಿದ್ದ 33 ಮಂದಿಯೂ ತುಮಕೂರು ನಗರದವರಾಗಿದ್ದು, ಅವರೆಲ್ಲನ್ನು ಗುರುತಿಸಿ ಹೋಂ ಕ್ವಾರಂಟೈನ್‌ನಲ್ಲಿಟ್ಟು ತೀವ್ರ ನಿಗಾ ವಹಿಸಲಾಗಿದೆ. ಈ 33 ಮಂದಿಯ ರಕ್ತದ ಮಾದರಿ, ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ತೀವ್ರ ನಿಗಾ
ಮೃತ ವೃದ್ಧನ ಕುಟುಂಬದ ಮೇಲೂ ಜಿಲ್ಲಾಡಳಿತ ತೀವ್ರ ನಿಗಾ ವಹಿಸಿದ್ದು, ಈತನಿಗೆ ಮೂರು ಪತ್ನಿಯರು, 16 ಜನ ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.
ಇವರೆಲ್ಲರನ್ನು ಐಸೋಲೇಷನ್‌ನಲ್ಲಿಟ್ಟು ನಿಗಾ ವಹಿಸಲಾಗಿದೆ ಎಂದ ಅವರು ಹೇಳಿದರು
ವೈದ್ಯರ ಮೇಲೂ ನಿಗಾ
ಇನ್ನು ಸದರಿ ವೃದ್ಧನಿಗೆ ಚಿಕಿತ್ಸೆ ನೀಡಿರುವ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರು, ಜಿಲ್ಲಾಸ್ಪತ್ರೆಯ ಒಬ್ಬರು ವೈದ್ಯರು ಸೇರಿ ಮೂವರ ವೈದ್ಯರು ಹಾಗೂ ನರ್ಸ್‌ಗಳನ್ನು ಸಹ ಹೋಂ ಕ್ವಾರಂಟೈನ್‌ನಲ್ಲಿಟ್ಟು ನಿಗಾ ವಹಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜ್ಯೋತಿಗಣೇಶ್, ಎಸ್ಪಿ ಡಾ. ಕೆ. ವಂಶಿಕೃಷ್ಣ, ಡಿಹೆಚ್ಓ ಡಾ. ಚಂದ್ರಿಕಾ ಮತ್ತಿತರರು ಉಪಸ್ಥಿತರಿದ್ದರು.

 

Leave a Comment