ಕೊರೊನಾ ಭೀತಿ: ಫುಟ್ಬಾಲ್‌ ಕ್ಲಬ್ ಡಾಕ್ಟರ್ ಆತ್ಮಹತ್ಯೆ

ಪ್ಯಾರಿಸ್, ಏಪ್ರಿಲ್ 6: ರೀಮ್ಸ್ ನಲ್ಲಿರುವ ಫ್ರಾನ್ಸ್ ಲೀಗ್‌ 1 ಕ್ಲಬ್ ಸದಸ್ಯರು ಈಗ ದುಃಖದಲ್ಲಿದ್ದಾರೆ. ಕ್ಲಬ್‌ಗೆ ದೀರ್ಘ ಕಾಲ ಸೇವೆ ಸಲ್ಲಿಸಿದ್ದ ಡಾಕ್ಟರ್ ಬರ್ನಾರ್ಡ್ ಗೊನ್ಜಾಲೆಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊರೊನಾವೈರಸ್ ಪರೀಕ್ಷೆಗೆ ಒಳಗಾಗಿದ್ದ ಬರ್ನಾರ್ಡ್‌ಗೆ ಮಾರಕ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಹೀಗಾಗಿ ಆಘಾತಗೊಂಡ ಡಾಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಾಕ್ಟರ್ ಬರ್ನಾರ್ಡ್ ಗೊನ್ಜಾಲೆಜ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮೂಲಗಳು ಖಾತ್ರಿಪಡಿಸಿದೆ. ‘ಆಘಾತವಾಗಿದೆ. ಅಳುವಂತಾಗುತ್ತಿದೆ. ಬರ್ನಾರ್ಡ್ ಗೊನ್ಜಾಲೆಜ್ ಅವರಿಗಾಗಿ ತುಂಬಾ ದುಃಖವಾಗಿದೆ.’ ಎಂದು ಲೀಗ್ 1 ಕ್ಲಬ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಈ ದಿನ ಬರೀ ಕ್ಲಬ್ ಮಾತ್ರ ಅಲ್ಲ, ನೂರಾರು ಪುರುಷರು, ಮಹಿಳೆಯರು ಕೂಡ ಶೋಕಾಚರಣೆಯಲ್ಲಿದ್ದಾರೆ,’ ಎಂದು ರೀಮ್ಸ್‌ನ ಮೇಯರ್ ಅರ್ನಾಡ್ ರಾಬಿನೆಟ್ ಹೇಳಿದ್ದಾರೆ. 60 ವರ್ಷ ವಯಸ್ಸಾಗಿದ್ದ ಡಾ. ಗೊನ್ಜಾಲೆಜ್, ಕ್ಲಬ್‌ಗೆ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿದ್ದರು.

‘ಡಾಕ್ಟರ್ ಬರ್ನಾರ್ಡ್ ಗೊನ್ಜಾಲೆಜ್ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ನಮಗೆ ತಿಳಿಯಿತು. ಅದರಲ್ಲಿ ಅವರು ತನಗೆ ಕೋವಿಡ್-19 ಸೋಂಕು ತಗುಲಿರುವುದನ್ನು ಬರೆದುಕೊಂಡಿದ್ದರು,’ ಎಂದು ರೀಮ್ಸ್ ನ ವೈದ್ಯಕೀಯ ಮೂಲವೊಂದು ಮಾಹಿತಿ ನೀಡಿದೆ.

Leave a Comment