ಕೊರೊನಾ ಪ್ರಥಮ ಬಲಿ : ಕೋತಿಗುಡ್ಡ ಭಯ ಭೀತಿ

* ಗ್ರಾಮದಲ್ಲಿ ಕೈ ಪಂಪ್ ಬಳಕೆ ಸ್ಥಗಿತ – ಅಂಗಡಿ ಮುಂಗಟ್ಟು ಬಂದ್
ರಾಯಚೂರು.ಮೇ.31- ಕಳೆದ ಒಂದು ವಾರದಿಂದ ಭಾರೀ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳ ಪತ್ತೆ ನಂತರ ಮೇ.29 ರಂದು ಮೊಟ್ಟ ಮೊದಲ ಕೊರೊನಾ ಬಲಿ ಜಿಲ್ಲೆಯಲ್ಲಿ ಆತಂಕ ತೀವ್ರಗೊಳ್ಳುವಂತೆ ಮಾಡಿದ್ದರೇ, ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಕೋತಿಗುಡ್ಡ ಗ್ರಾಮದಲ್ಲಿ ಜನ ಭಯಭೀತಗೊಳ್ಳುವಂತೆ ಮಾಡಿದೆ.
ಮಹಾರಾಷ್ಟ್ರದಿಂದ ಬಂದ ಶಿವಪ್ಪ ಬಲ್ಲಿದ್ ಎನ್ನುವವರು ಮೇ.29 ರಂದು ಬೆಳಗಿನ ಜಾವ ಮೃತಪಟ್ಟಿದ್ದರು. ಈ ಸಾವಿನ ನಂತರ ಇವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಮೇ.28 ರಂದು ಕೊರೊನಾ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ.29 ರಂದು ಮೃತಪಟ್ಟ ಶಿವಪ್ಪ ಬಲ್ಲಿದ್ ಶವ ಅವರ ಕುಟುಂಬದವರಿಗೆ ನೀಡುವ ಮೂಲಕ ಜಿಲ್ಲಾಡಳಿತ ಕೋವಿಡ್ ನಿಯಮಗಳನ್ನೇ ಉಲ್ಲಂಘಿಸಿತು.
ಕೊರೊನಾ ಪೀಡಿತ ವ್ಯಕ್ತಿ ಮೃತಪಟ್ಟರೇ ನಿರ್ದಿಷ್ಟ ನಿಯಮ ಅನುಸರಿಸಬೇಕೆಂದು ಸ್ಪಷ್ಟ ನಿಯಮಗಳಿದ್ದರೂ, ಜಿಲ್ಲಾಡಳಿತ ಇದನ್ನು ಅನುಸರಿಸದಿರುವುದು ಗ್ರಾಮಾಂತರ ಪ್ರದೇಶದಲ್ಲಿ ತೀವ್ರ ತಳಮಳಕ್ಕೆ ದಾರಿ ಮಾಡಿದೆ. ಶಿವಪ್ಪ ಬಲ್ಲಿದ್ ಅವರ ಶವ ಅವರ ಕುಟುಂಬದವರಿಗೆ ನೀಡುವುದರೊಂದಿಗೆ ಮನೆಯ ಮುಂದೆ ಶವದ ಸುತ್ತಮುತ್ತ ಮೂರು ಅಡಿಗಳ ಅಂತರದಲ್ಲಿ ಜನರು ದುಃಖ ತೋಡಿಕೊಂಡರು. ನಂತರ ಅಲ್ಲಿಂದ ಮೃತದೇಹವನ್ನು ಅವರ ಸ್ವಂತ ಹೊಲದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅನೇಕರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಅಂತ್ಯ ಸಂಸ್ಕಾರಗೊಂಡ ಮಾರನೇ ದಿನ ಶಿವಪ್ಪ ಬಲ್ಲಿದ್ ಎಂಬುವವರಿಗೆ ಕೊರೊನಾ ಇರುವುದಾಗಿ ವರದಿ ನೀಡಲಾಗಿತ್ತು. ಇದು ಈಗ ಗ್ರಾಮದಲ್ಲಿ ಭಾರೀ ಆತಂಕಕ್ಕೆ ದಾರಿ ಮಾಡಿದೆ. ಅನೇಕರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿರುವುದು ಮಾತ್ರವಲ್ಲದೇ, ಶವವನ್ನು ಸಂಸ್ಕಾರದವರೆಗೂ ಪ್ಲಾಸ್ಟಿಕ್ ಹಾಸಿಗೆಯೊಂದರಲ್ಲಿ ಕೊಂಡೊಯ್ಯಲಾಗಿತ್ತು.
ಇದು ಮತ್ತೇ ಗ್ರಾಮದಲ್ಲಿ ಕೊರೊನಾ ತೀವ್ರತೆಗೆ ದಾರಿ ಮಾಡಬಹುದೇ ಎನ್ನುವ ಭಯ ಈಗ ಜನರನ್ನು ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿದ್ದ ಒಂದು ಕೊಳವೆಬಾವಿ ಕೈ ಪಂಪ್‌ನ್ನು ಮುಚ್ಚಲಾಗಿದೆ. ಗ್ರಾಮದಲ್ಲಿರುವ ಅಂಗ‌ಡಿ, ಮುಂಗಟ್ಟು ಬಂದ್ ಮಾಡುವ ಮೂಲಕ ಸ್ವಯಂ ಗ್ರಾಮಸ್ಥರು ಕೊರೊನಾ ಮುಂಜಾಗ್ರತೆ ಅನುಸರಿಸಿದರು. ಈ ಕುರಿತು ಗ್ರಾ.ಪಂ. ಮಾನಸಯ್ಯ ನಾಯಕ ಅವರನ್ನು ಸಂಪರ್ಕಿಸಿದಾಗ ಶಿವಪ್ಪ ಬಲ್ಲಿದ್ ಅವರಿಗೆ ಕೊರೊನಾ ಪತ್ತೆಯಾಗಿಲ್ಲವೆಂದು ಗ್ರಾಮಕ್ಕೆ ಶವ ತರಲಾಗಿತ್ತು.
ಆದರೆ, ನಂತರ ಕೊರೊನಾ ದೃಢಪಟ್ಟಿರುವ ಬಗ್ಗೆ ಅಧಿಕಾರಿಗಳು ಹೇಳುತ್ತಿರುವುದರಿಂದ ಗ್ರಾಮದಲ್ಲಿ ಯಾವ ದುರಂತ ಸಂಭವಿಸಲಿದೆಯೋ ಎನ್ನುವ ಆತಂಕ ತೀವ್ರಗೊಂಡಿದೆ. ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಾಗಿತ್ತು. ಇವರ ಈ ನಿರ್ಲಕ್ಷ್ಯೆ ಈಗ ಗ್ರಾಮಸ್ಥರು ಕಳವಳಕ್ಕೆ ಗುರಿಯಾಗುವಂತೆ ಮಾಡಿದೆ.

Share

Leave a Comment