ಕೊರೊನಾ ನಿರ್ಮೂಲನೆಗೆ ಸಹಕರಿಸಿ – ಕುಂಟ್ನಾಳ

ಆರ್ಯವೈಶ್ಯ ಮಹಾಸಭಾ : ರಕ್ತದಾನ ಶಿಬಿರ
ರಾಯಚೂರು.ಮೇ.02- ವಿಶ್ವಾದ್ಯಂತ ಕೊರೊನಾ ಮಹಾಮಾರಿ ತೀವ್ರವಾಗಿ ಇರುವುದರಿಂದ ದೇಶದಲ್ಲಿ ಲಾಕ್ ಡೌನ್ ವಿಧಿಸಲಾಗಿದೆ. ಆರ್ಯವೈಶ್ಯ ಸಮುದಾಯ ಮತ್ತು ಸಾರ್ವಜನಿಕರು ಅಗತ್ಯವಿದ್ದರೇ ಮಾತ್ರ ಮನೆಯಿಂದ ಹೊರಗೆ ಬರಬೇಕು. ಇಲ್ಲದಿದ್ದರೇ, ಮನೆಯಲ್ಲಿಯೇ ಉಳಿದು ಕೊರೊನಾ ಮಹಾಮಾರಿ ವಿರುದ್ಧ ಸಮರ ಸಾರುವಂತೆ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಹಿರಿಯ ಉಪಾಧ್ಯಕ್ಷರಾದ ಕುಂಟ್ನಾಳ ವೆಂಕಟೇಶ ಅವರು ಹೇಳಿದರು.
ಅವರಿಂದು ವಾಸವಿ ಜಯಂತಿ ಅಂಗವಾಗಿ ಐಎಂಎ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡುತ್ತಾ, ಕೊರೊನಾ ವಿರುದ್ಧ ಈಗಾಗಲೇ ದೇಶದಲ್ಲಿ ಸಮರ್ಪಕವಾಗಿ ಲಾಕ್ ಡೌನ್ ಮೂಲಕ ರಕ್ಷಣೆ ಕಾರ್ಯ ಕೈಗೊಳ್ಳಲಾಗಿದೆ. ಜನರು ಸಹ ಇದಕ್ಕೆ ಸಹಕರಿಸುವ ಅಗತ್ಯವಿದೆ. ಈಗಾಗಲೇ ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಮೊದಲನೇ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿ ದಿನ 1 ಸಾವಿರ ಪ್ಯಾಕೇಟ್‌ನಂತೆ ಊಟ ನೀಡುವ ಮೂಲಕ ಸಮಾಜ ಬಡವರ ಪರ ನಿಂತಿದೆ.
ಆರ್ಯವೈಶ್ಯ ಸಮಾಜದ ವಿದ್ಯಾರ್ಥಿಗಳಿಗಾಗಿ ಮಹಾಸಭಾ ವಿಶೇಷ ಯೋಜನೆಯೊಂದನ್ನು ಜಾರಿಗೊಳಿಸಿದೆ. 1.25 ಕೋಟಿ ಹಣ ನಿಗದಿ ಪಡಿಸುವ ಮೂಲಕ ಸಮಾಜದ ಬಡ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ನೆರವು ನೀಡಲಾಗುತ್ತಿದೆ. ರಾಜ್ಯಾದ್ಯಂತ ಒಟ್ಟು 2500 ಜನರಿಗೆ ಈ ಸೌಲಭ್ಯ ದೊರೆಯಲಿದೆ. ಅಗತ್ಯವಿರುವ ವಿದ್ಯಾರ್ಥಿಗಳು ಮಹಾಸಭೆಗೆ ಅರ್ಜಿ ಹಾಕುವ ಮೂಲಕ ಈ ಲಾಭ ಪಡೆಯುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ದೇವನಪಲ್ಲಿ ವಾಸುದೇವ, ಜಗದೀಶ ಗುಪ್ತಾ, ಎಂ.ಎನ್.ಮೂರ್ತಿ, ಭೀಮಾಶಂಕರ್, ಎಂ.ಆರ್. ಸುನಿತಾ, ಕೆ.ಸಿ.ವೀರೇಶ, ಎಂ.ಆರ್. ಹನುಮಂತಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share

Leave a Comment