ಯಾರೂ ನೀನು ಮಾನವ : ಕೊರೋನಾ ಹಾಡು ಬಿಡುಗಡೆಗೊಳಿಸಿದ ಮುಖ್ಯಮಂತ್ರಿಗಳು

 

ಬೆಂಗಳೂರು, ಮೇ 02: ಕೋವಿಡ್ 19 ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಕರೋನ ಯೋಧರಿಗೆ ಧನ್ಯವಾದಗಳನ್ನು ಅರ್ಪಿಸುವ, ವೀಡಿಯೋ ಹಾಡನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾ ದಲ್ಲಿ ಬಿಡುಗಡೆ ಮಾಡಿದರು.
ವಿಭಿನ್ನ ಶೈಲಿಯ ಸಾಹಿತ್ಯದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದಿರುವ ಯೋಗರಾಜ್ ಭಟ್ ಅವರು ಕೊರೋನಾ ಜಾಗೃತಿಯ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಪೊಲೀಸ್ ಸಹಯೋಗದಲ್ಲಿ ಈ ಜಾಗೃತಿ ಗೀತೆ ರಚಿಸಲಾಗಿದ್ದು, ಕೊರೊನಾ ವಾರಿಯರ್ಸ್ ಗೆ ವಿಡಿಯೋ ಮೂಲಕ ಕೃತಜ್ಞತೆ ಸಲ್ಲಿಸಲಾಗಿದೆ.

ಹೃದಯ ಬಡಿತದ ಶಬ್ದ ಆರಂಭವಾಗುವ ಈ ಹಾಡಿನ ಮಧ್ಯೆ ವಿಧಾನಸೌಧ, ಬೆಂಗಳೂರು ಪೊಲೀಸರು ವೈದ್ಯರು, ಪೌರ ಕಾರ್ಮಿಕರು ಸೇರಿದಂತೆ ಮಾಧ್ಯಮದವರನ್ನು ತೋರಿಸಲಾಗಿದೆ.ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಯಾರು ನೀನು ಮಾನವ, ಕೇಳುತಿಹುದು ಕೊರೋನಾ ಎಂಬ ಹಾಡು ಅದ್ಭುತವಾಗಿ ಮೂಡಿಬಂದಿದೆ.

ಈ ವಿಡಿಯೋದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹಾಗೂ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಕೂಡ ಇದ್ದಾರೆ.ಇನ್ನು, ಕೊರೊನಾ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಸಿಬ್ಬಂದಿ ಸೇರಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಡಿಸಿಪಿಗಳು‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಈ ಹಾಡಿಗೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಬೆಂಗಳೂರಿನ ಟೌನ್ ಹಾಲ್, ಪ್ರೀಡಂ ಪಾರ್ಕ್ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲಾಗಿತ್ತು.ಈ ಸಂದರ್ಭದಲ್ಲಿ ನಗರ ಪೋಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಗಾಯಕರಾದ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಝೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರ್ ಉಪಸ್ಥಿತರಿದ್ದರು.

Leave a Comment