ಕೊರೊನಾ ಕಾರ್ಮೋಡ

ಬೆಂಗಳೂರು, ಏ. 2- ಕಳೆದ ಒಂದು ತಿಂಗಳಿಂದೀಚೆಗೆ ರೌದ್ರನರ್ತನ ಮಾಡುತ್ತಿರುವ ಮಹಾಮಾರಿ ಕೊರೊನಾ ವೈರಾಣು ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಅಲ್ಪ ಅಲಕ್ಷ್ಯ ಮಾಡಿದರೂ ಮಾನವ ಕುಲವನ್ನೇ ಮಣ್ಣು ಮಾಡುವಂತಹ ನೀಚಶಕ್ತಿ ಲಕ್ಷಣಗಳನ್ನು ಹೊಂದಿರುವ ಈ ವೈರಾಣು ಮಿಂಚಿನ ವೇಗದಲ್ಲಿ ಹರಡುತ್ತಿದೆ.
ಆರ್ಥಿಕವಾಗಿ ಬಲಿಷ್ಠವಾಗಿರುವ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿರುವ ಅಮೆರಿಕ, ಇಟಲಿ, ಸ್ಪೇನ್, ಚೀನಾ, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್‌ನಂತಹ ಹತ್ತು ಹಲವು ದೇಶಗಳನ್ನು ಕೊರೊನಾ ವೈರಾಣು ತಲ್ಲಣಗೊಳಿಸಿದೆ.
ವಿಶ್ವದ ಒಟ್ಟು 203 ರಾಷ್ಟ್ರಗಳಲ್ಲಿ ಕಂಡಬಂದ ಈ ವೈರಾಣು ಭಾರತದಲ್ಲೀಗ ಬೇರೂರಿದೆ. ಭೌಗೋಳಿಕವಾಗಿ ಚಿಕ್ಕದಾಗಿರುವ ಹಾಗೂ ಹೆಚ್ಚು ಜನಸಾಂದ್ರತೆ ಹೊಂದಿರುವ ಭಾರತಕ್ಕೆ ಈ ಮಹಾಮಾರಿ ಇಡೀ ದೇಶಕ್ಕೆ ಆರೋಗ್ಯ ತುರ್ತು ಪರಿಸ್ಥಿತಿ ತಂದೊಡ್ಡಿದೆ.
ಕಳೆದ ಹತ್ತು ದಿನಗಳಿಂದ ಇಡೀ ದೇಶವನ್ನೇ ಸ್ತಬ್ಧಗೊಳಿಸಿರುವ ಈ ಮಹಾಮಾರಿಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ವೃತ್ತಿ, ವ್ಯಾಪಾರ, ಉತ್ಪಾದನೆ, ಸೇವೆ, ಪ್ರವಾಸೋದ್ಯಮ, ನಿರ್ಮಾಣ, ಮನರಂಜನೆ ಸೇರಿದಂತೆ, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಇಳಿಮುಖದತ್ತ ಸಾಗುತ್ತಿದೆ.
ಸೋಂಕು ಹರಡುವಿಕೆ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅತಂತ್ರತೆ ಮನೆಮಾಡಿದೆ. ಇದರಿಂದ ದೇಶದ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ.
ಕೊರೊನಾ ವೈರಾಣುವಿನಿಂದಾಗಿ ವಿವಿಧ ಕ್ಷೇತ್ರಗಳ ಮೇಲಾಗಿರುವ ದುಷ್ಪರಿಣಾಮಗಳ ಕುರಿತು ”ಸಂಜೆವಾಣಿ ಕೊರೊನಾ ಕಾರ್ಮೋಡ” ಎಂಬ ವಿಶೇಷ ವರದಿಗಳನ್ನು ನಿತ್ಯ ನಿಮ್ಮ ಮುಂದಿಡಲಿದೆ. ದೇಶದ ಸದ್ಯದ ಸ್ಥಿತಿಯಿಂದಾಗಿ ತೀವ್ರ ಇಕ್ಕಟ್ಟಿಗೆ ಸಿಲುಕಿರುವ ನತದೃಷ್ಟರು ಸಹ ತಮ್ಮ ನೋವುಗಳನ್ನು ಹಂಚಿಕೊಳ್ಳಲು ಈ ಅಂಕಣ ಒಂದು ವೇದಿಕೆಯಾಗಲಿದೆ.
ಸಂಪರ್ಕಿಸಲು: 9886839449
ಇ-ಮೇಲ್ sanjevani@gmail.com

Leave a Comment