ಕೊರೊನಾ ಅಬ್ಬರ ದೇಶ ತತ್ತರ: ಒಂದೇ ದಿನ 140 ಮಂದಿ ಸಾವು 5611 ಮಂದಿಗೆ ಸೋಂಕು 1.6 ಲಕ್ಷಕ್ಕೆ ಏರಿಕೆ

ನವದಹೆಲಿ, ಮೇ ೨೦- ಕೊರೊನಾ ಮಹಾಮಾರಿಯ ಅಟ್ಟಹಾಸ ದೇಶದಲ್ಲಿ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಸೋಂಕಿತರ ಸಂಖ್ಯೆ 1ಲಕ್ಷದ 6 ಸಾವಿರದ 750ಕ್ಕೆ ಏರಿದೆ. ಒಂದೇ ದಿನ 5,611 ಹೊಸ ಸೋಂಕು ಪ್ರಕರಣಗಳುಪತ್ತೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಒಂದೇ ದಿನ ಗರಿಷ್ಠ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗಿರುವುದು ಇದೇ ಮೊದಲಾಗಿದೆ.

5611 ಹೊಸ ಸೋಂಕಿತರು ಒಳಗೊಂಡಂತೆ ಒಟ್ಟಾರೆ ದೇಶದಲ್ಲಿ 1 ಲಕ್ಷ 6 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿನಿಂದ ಬಳಲುತ್ತಿರುವುದು ದೃಢಪಟ್ಟಿದೆ.

ಮಹಾಮಾರಿ ಸೋಂಕಿಗೆ ನಿನ್ನೆ ಒಂದೇ ದಿನ 140 ಮಂದಿ ಜೀವ ಕಳೆದುಕೊಂಡಿದ್ದು, ಒಟ್ಟಾರೆ ಸೋಂಕಿಗೆ ಬಲಿಯಾದವರ ಸಂಖ್ಯೆ 3303ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ಮಾಹಿತಿ ನೀಡಿದೆ.
ದೇಶದಲ್ಲಿ 61,149 ಸಕ್ರಿಯ ಪ್ರಕರಣಗಳಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 42,298 ಮಂದಿ ಗುಣಮುಖರಾಗಿದ್ದಾರೆ ಎಂದು, ಗುಣಮುಖರ ಪ್ರಮಾಣ 39.62ಕ್ಕೇರಿದೆ ಎಂದು ಸಚಿವಾಲಯ ತಿಳಿಸಿದೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರಲು ಮಹಾರಾಷ್ಟ್ರದ ಕೊಡುಗೆ ಹೆಚ್ಚಾಗಿದೆ. ಇಡೀ ದೇಶದಲ್ಲಿ ಹೆಚ್ಚು ಬಾಧಿತವಾಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 37,136ಕ್ಕೆ ಏರಿದೆ. ನಿನ್ನೆ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಈ ರಾಜ್ಯದಲ್ಲಿ 1325 ಮಂದಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ತಮಿಳುನಾಡು ಇದ್ದು, ಈ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,448 ಕ್ಕೆ ಏರಿದೆ. ಗುಜರಾತ್‌ನಲ್ಲಿ 12,140 ಸೋಂಕು ಪ್ರಕರಣಗಳು ಪತ್ತೆಯಾಗಿದ್ದರೆ, ದೆಹಲಿಯಲ್ಲಿ 10,554 ಪ್ರಕರಣಗಳು ದೃಢಪಟ್ಟಿವೆ.
ದೇಶದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಆತಂಕಕ್ಕೀಡು ಮಾಡಿದೆ.

ಸೋಂಕು ನಿಗ್ರಹಕ್ಕೆ ಈಗಾಗಲೇ 4ಹಂತದ ಲಾಕ್‌ಡೌನ್ ನಿಯಮಗಳನ್ನು ಜಾರಿಗೊಳಿಸಿದ್ದು, 4ನೇ ಹಂತದ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡಲು ಹೆಚ್ಚಿನ ಪ್ರಮಾಣದಲ್ಲಿ ವಿನಾಯ್ತಿಗಳನ್ನು ಘೋಷಿಸಲಾಗಿದೆ.

ಲಾಕ್‌ಡೌನ್ ಸಡಿಲಿಕೆಯಿಂದಲೇ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಚರ್ಚೆಗಳು ದೇಶದೆಲ್ಲೆಡೆ ನಡೆಯುತ್ತಿವೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಅಧ್ಯಕ್ಷತೆಯಲ್ಲಿ ಇಂದು ಕೇಂದ್ರ ಸಚಿವ ಸಂಪುಟ ನಡೆಯಲಿದ್ದು, ಲಾಕ್‌ಡೌನ್ ಸಡಿಲಿಕೆಯಿಂದಾಗಿ ಆಗಿರುವ ಸಾಧಕ ಬಾಧಕಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.

ಕೊರೊನಾ ಮಹಾಮಾರಿ ಜತೆಗೆ ಅಂಪಾನ್ ಚಂಡಮಾರುತ ಇಂದು ಒಡಿಶಾ ಮತ್ತು ಪಶ್ಚಿಮಬಂಗಾಳದ ಕರಾವಳಿ ಭಾಗಕ್ಕೆ ಅಪ್ಪಳಿಸುವ ಸಾಧ್ಯತೆಗಳಿದ್ದು, ಇದರಿಂದ ಎದುರಾಗಲಿರುವ ಸವಾಲುಗಳನ್ನು ನಿಭಾಯಿಸುವ ಕುರಿತಂತೆಯೂ ಸಭೆಯಲ್ಲಿ ಚರ್ಚೆಯಾಗಲಿದೆ.

ಕೊರೊನಾ ತಡೆಗೆ ಬಹುತೇಕ 2 ತಿಂಗಳಿಂದ ಜಾರಿಯಲ್ಲಿರುವ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಅದರ ಪುನಶ್ಚೇತನಕ್ಕೆ ಈಗಾಗಲೇ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಮೊತ್ತವನ್ನು ವಿವಿಧ ವಲಯಗಳಿಗೆ ಬಿಡುಗಡೆ ಮಾಡುವ ಕುರಿತಂತೆಯೂ ಸಚಿವ ಸಂಪುಟ ತೀರ್ಮಾನಿಸುವ ಸಾಧ್ಯತೆ ಇದೆ.
ವಿಶೇಷವಾಗಿ ವಲಸೆ ಕಾರ್ಮಿಕರ ಸಮಸ್ಯೆ ಬಹುದೊಡ್ಡ ಸವಾಲಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಾಡುತ್ತಿದ್ದು, ವಲಸೆ ಕಾರ್ಮಿಕರು ತವರಿಗೆ ಮರಳಲು ಅನುಕೂಲ ಮಾಡಿಕೊಡುವುದು ಮತ್ತು ಅವರ ಜೀವನೋಪಾಯಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುವ ವಿಚಾರಗಳೂ ಚರ್ಚೆಗೆ ಬರಲಿವೆ.

Leave a Comment