ಕೊರೊನಾಗೆ ಭಾರತ ಹೈರಾಣ

ನವದೆಹಲಿ, ಜೂ. ೨೯- ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 19,459 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇದುವರೆಗೂ ದೇಶದಲ್ಲಿ 5, 48, 318ಪ್ರಕರಣಗಳು ದಾಖಲಾಗಿವೆ. ಈ ನಡುವೆ ದೇಶದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಾಂಕ್ರಾಮಿಕ ರೋಗ ಸ್ಥಿವೀಕರಣಗೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 380 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದುವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆ 16,475 ಕ್ಕೆ ಏರಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಗುಣಮುಖರ ಪ್ರಮಾಣವೂ ಶೇ. 50ಕ್ಕೂ ಹೆಚ್ಚಾಗಿದ್ದು, ಆಸ್ಪತ್ರೆಗಳಲ್ಲಿ ವೈದ್ಯರು ನೀಡುತ್ತಿರುವ ಚಿಕಿತ್ಸೆಯ ಪರಿಣಾಮವಾಗಿ ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕು ಬಾಂಧಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಇದಾದ ನಂತರದ ಸ್ಥಾನದಲ್ಲಿ ದೆಹಲಿ, ತಮಿಳುನಾಡು, ಗುಜರಾತ್, ತೆಲಂಗಾಣ, ಪಶ್ಚಿಮಬಂಗಾಳ, ಉತ್ತರ ಪ್ರದೇಶ, ಆಂಧ್ರಪ್ರದೇಶ ರಾಜ್ಯಗಳು ಮುಂದವರೆದಿವೆ.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ 59 ಸಾವಿರ ದಾಟಿದ್ದು, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಜೂನ್ 30 ರವರೆಗೆ ಯಾವುದೇ ನಿರ್ಬಂಧಗಳನ್ನು ಸಡಿಲಗೊಳಿಸದಿರಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.
ಮಹಾರಾಷ್ಟ್ರ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ಸೋಂಕು ಬಾಧಿತರ ಪ್ರಮಾಣ ಅಧಿಕವಾಗಿದ್ದು, ಒಟ್ಟಾರೆ ದೇಶದಲ್ಲಿ ಪತ್ತೆಯಾಗಿರುವ ಸೋಂಕು ಪ್ರಕರಣಗಳ ಪೈಕಿ ಈ ರಾಜ್ಯಗಳ ಪಾಲು ಶೇ. 85 ಕ್ಕೂ ಹೆಚ್ಚಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿದೆ.
ಮತ್ತೊಂದೆಡೆ ಗುಣಮುಖರಾದವರ ಸಂಖ್ಯೆ 3,21,722 ಕ್ಕೆ ಏರಿದ್ದು, ಸಕ್ರಿಯ ಪ್ರಕರಣಗಳು 2, 10,120 ಆಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಕ್ರಿಯ ಪ್ರಕರಣಗಳು ಹಾಗೂ ಗುಣಮುಖರಾದವರ ನಡುವೆ ಕೇವಲ 10 ಸಾವಿರದಷ್ಟು ಅಂತರವಿದೆ ಹಾಗಾಗಿ ಗುಣಮುಖರ ಪ್ರಮಾಣ ಏರುಗತಿಯಲ್ಲಿ ಸಾಗಿದೆ ಎಂದು ಇದೇ ಮೂಲಗಳು ತಿಳಿಸಿವೆ.
ದೇಶದಲ್ಲಿ ಕೆಲವು ಸಡಿಲಿಕೆಗಳೊಂದಿಗೆ ಜಾರಿಯಲ್ಲಿರುವ 5ನೇ ಹಂತದ ಲಾಕ್‌ಡೌನ್ ಇನ್ನೇನು ಮುಗಿಯುವ ಹಂತದಲ್ಲಿದೆ. ಇದರ ನಡುವೆಯೇ ಕೆಲವು ರಾಜ್ಯಗಳು ಲಾಕ್‌ಡೌನ್ ನಿಯಮಗಳನ್ನು ವಿಸ್ತರಿಸಲು ತೀರ್ಮಾನಿಸಿವೆ. ಪಶ್ಚಿಮಬಂಗಾಳದಲ್ಲಿ ಜುಲೈ 31 ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲು ಟಿಎಂಸಿ ಸರ್ಕಾರ ನಿರ್ಧರಿಸಿದೆ.
ದೆಹಲಿಯಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಲಾಕ್‌ಡೌನ್ ವಿಸ್ತರಣೆ ಮಾಡುವ ಉದ್ದಶ ಸರ್ಕಾರಕ್ಕಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಸ್ಪಷ್ಟಪಡಿಸಿದ್ದಾರೆ.
ಅಸ್ಸಾಂನ ರಾಜಧಾನಿ ಗುಹಾಟಿಯಲ್ಲಿ ನಿನ್ನೆಯಿಂದ ಜಾರಿಗೆ ಬರುವಂತೆ 14 ದಿನಗಳ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ವಿಶೇಷವಾಗಿ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರು ತವರಿಗೆ ಮರಳಿದ್ದರಿಂದ ಸೋಂಕು ಪ್ರಮಾಣ ಏರಿಕೆಯಾಗುತ್ತಿದೆ ಎಂಬುದು ಅಲ್ಲಿನ ಸರ್ಕಾರದ ಅಭಿಪ್ರಾಯವಾಗಿದೆ.
ಬಿಎಸ್ಎಫ್ ಯೋಧರಿಗೂ ಸೋಂಕು ಹೆಚ್ಚಳ
ಕಳೆದ 24 ಗಂಟೆಗಳಲ್ಲಿ ಗಡಿ ಭದ್ರತಾ ಪಡೆಯ 21 ಯೋಧರಿಗೆ ಸೋಂಕಿರುವುದು ದೃಢಪಟ್ಟಿದೆ. ಇದುವರೆಗೂ ಸೋಂಕಿತರ ಪೈಕಿ 655 ಯೋಧರು ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ.
ಕೊರೊನಾ ನಿಯಂತ್ರಣದ ಜವಾಬ್ದಾರಿ ಹೊತ್ತಿರುವ ನೋಡೆಲ್ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮೂಲಗಳ ಪ್ರಕಾರ ನಿನ್ನೆ ಒಂದೇ ದಿನ 1, 70,560 ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೂ ಒಟ್ಟಾರೆ 83,98,362 ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಂಡಳಿ ತಿಳಿಸಿದೆ.

Share

Leave a Comment