ಕೊರೆಯುವ ಚಳಿ, ಸಿಲಿಕಾನ್ ನಗರ ತತ್ತರ

ಬೆಂಗಳೂರು, ಜ ೬-ಉತ್ತರ ಭಾರತದಲ್ಲಿ ಶೀತಗಾಳಿ ಬೀಸುತ್ತಿರುವ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾಕಡೆಗಳಲ್ಲಿ ಮೈಕೊರೆಯುವ ಚಳಿ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ೭ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಪ್ರಮಾಣದ ಉಷ್ಣಾಂಶ ದಾಖಲಾಗಿದೆ.

ಕಳೆದ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ೬.೩ರಷ್ಟು ಸೆಲ್ಸಿಯಸ್ ದಾಖಲಾಗುವ ಮೂಲಕ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೇ ಇದು ಅತ್ಯಂತ ಕನಿಷ್ಠ ಪ್ರಮಾನದ ಉಷ್ಣಾಂಶ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಇನ್ನು ಕಳೆದ ೨೪ ಗಂಟೆಗಳ ಅವಧಿಯಲ್ಲಿ ಗರಿಷ್ಠ ತಾಪಮಾನ ೩೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಉತ್ತರ ಭಾಗದಿಂದ ಬೀಸಿ ಬರುತ್ತಿರುವ ಚಳಿಗಾಳಿಯಿಂದ ಬೆಂಗಳೂರಲ್ಲಿ ತಾಪಮಾನ ಕ್ಷೀಣಿಸಿದೆ. ಇದು ಮುಂದಿನ ವಾರದವರೆಗೂ ಮುಂದುವರೆಯಲಿದೆ ಎಂದು ರೆಡ್ಡಿ ತಿಳಿಸಿದ್ದಾರೆ.

ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬೀದರ್, ಕಲುಬುರ್ಗಿ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ ೩ ರಿಂದ ೫ ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ದಾಖಲಾಗುತ್ತಿದ್ದು, ಇನ್ನೂ ಒಂದು ವಾರದ ಕಾಲ ಇದೇ ರೀತಿ ಮೈ ಕೊರೆಯುವ ಚಳಿ ಮುಂದುವರೆಯಲಿದೆ. ಮಧ್ಯಪ್ರದೇಶ, ರಾಜಸ್ತಾನ ರಾಜ್ಯಗಳಿಂದ ಶೀತಗಾಳಿ ಬೀಸುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಚಳಿ ಬೀಸುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಚಳಿಯಿಂದ ಈ ಭಾಗದಲ್ಲಿ ರೈತರು ಬೆಳೆದ ಬೆಳೆಗೂ ತೀವ್ರ ಹಾನಿಯುಂಟಾಗಿದೆ.

ಬೆಂಗಳೂರಿನಲ್ಲಿ ೨೦೧೨ರಲ್ಲಿ ೧೨.೧ ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿತ್ತು. ಆದರೆ ಜ.೨ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ೧೧.೧ ಡಿಗ್ರಿ ಸೆಲ್ಸಿಯಸ್‌ಗೆ ಕನಿಷ್ಠ ತಾಪಮಾನ ಇಳಿಕೆಯಾಗಿತ್ತು. ಈ ವರ್ಷದ ಆರಂಭದಿಂದಲೂ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಸಂಕ್ರಾಂತಿ ಹಬ್ಬದವರೆಗೂ ಇದೇ ರೀತಿ ಚಳಿ ಮುಂದುವೆರಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

Leave a Comment