ಕೊರತೆಯಾಗದಂತೆ ಬೀಜ, ಗೊಬ್ಬರ ದಾಸ್ತಾನು: ಸಚಿವರ ಭರವಸೆ

ಬೆಂಗಳೂರು, ಜೂ. ೧೪- ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯವಿರುವ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಇಂದಿಲ್ಲಿ ತಿಳಿಸಿದರು.
ಮುಂಗಾರು ಹಂಗಾಮಿಗೆ 6.29 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳಿಗೆ ಬೇಡಿಕೆಯಿದ್ದು, ನಮ್ಮಲ್ಲಿ 10.82 ಲಕ್ಷ ಕ್ವಿಂಟಾಲ್ ಲಭ್ಯತೆ ಇದ್ದು, ಇದುವರೆಗೆ 36,065 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು, ಇನ್ನು 10.46 ಲಕ್ಷ ಕ್ವಿಂಟಾಲ್ ದಾಸ್ತಾನಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅದೇ ರೀತಿ ಈ ಹಂಗಾಮಿಗೆ 22.45 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಈವರೆಗೆ 6.38 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ವಿವಿಧ ಜಿಲ್ಲೆಗಳಲ್ಲಿ 7.94 ಲಕ್ಷ ಮೆಟ್ರಿಕ್ ಟನ್ ದಾಸ್ತಾನಿದ್ದು, ಈ ವಿಚಾರದಲ್ಲೂ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ವಾರ್ಷಿಕ ವಾಡಿಕೆ ಮಳೆ 11.56 ಮಿ.ಮೀ. ಆಗಿದ್ದು, ನಿನ್ನೆವರೆಗೆ 196.9 ಮಿ.ಮೀಟರ್ ಮಳೆ ಆಗಬೇಕಾಗಿತ್ತು. ಆದರೆ ಈವರೆಗೆ 129.90 ಮಿ.ಮೀ. ಮಳೆಯಾಗಿದೆ. ಈ ವರ್ಷ ವಾಡಿಕೆ ಮಳೆಯಲ್ಲಿ ಶೇ. 34 ರಷ್ಟು ಕೊರತೆ ಉಂಟಾಗಿದೆ ಎಂದರು.
ಮುಂಗಾರು ಹಂಗಾಮಿಗೆ 76.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಈವರೆಗೆ 6.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆ ಬಿತ್ತನೆ ಪ್ರಮಾಣದಲ್ಲಿ ಶೇ. 8 ರಷ್ಟು ಪ್ರಗತಿ ಕಂಡು ಬಂದಿದೆ ಎಂದರು.
 ಸಮಗ್ರ ನೀತಿ
ಕೃಷಿ ಕ್ಷೇತ್ರವನ್ನು ಉದ್ಯಮವನ್ನಾಗಿಸಿ ಪರಿಗಣಿಸುವ ಅಗತ್ಯತೆ ಇದೆ. ಸಾಮೂಹಿಕ ಸಾಗುವಳಿ ಯೋಜನೆಯನ್ನು ಪ್ರೋತ್ಸಾಹಿಸಲು ಸದ್ಯದಲ್ಲೇ ಸಮಗ್ರ ನೀತಿಯೊಂದನ್ನು ರೂಪಿಸಲಾಗುವುದು. ಈಗಿರುವ ಕಾಯ್ದೆಗಳಿಗೆ ತಿದ್ದುಪಡಿ ತಂದು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಮೂಹಿಕ ಸಾಗುವಳಿ ಮಾಡಲು ಬಯಸುವ ರೈತರಿಗೆ ಆಧುನಿಕ ಕೃಷಿ ಹಾಗೂ ಲಾಭದಾಯಕ ಬೆಳೆಗಳನ್ನು ಬೆಳೆಯುವ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಅವರಿಗೆ ಅಗತ್ಯವಿರುವ ಬಂಡವಾಳ, ಕೃಷಿ ಉಪಕರಣಗಳು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೃಷಿ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯತೆ ಹಿನ್ನೆಲೆಯಲ್ಲಿ ಸಾಮೂಹಿಕ ಸಾಗುವಳಿಗೆ ಉತ್ತೇಜನ ನೀಡಲಾಗುವುದು ಎಂದರು.
ಕಡಿಮೆ ನೀರನ್ನು ಬಳಕೆ ಮಾಡಿ ಹೆಚ್ಚಿನ ಇಳುವರಿ ತೆಗೆಯುವ ನಿಟ್ಟಿನಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆಗೆ ಉನ್ನತ ಅಧಿಕಾರಿಯೊಬ್ಬರ ನೇತೃತ್ವದಲ್ಲಿ “ವಿಶೇಷ ಮಿಷನ್” ರಚಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಈ ಕೃಷಿಗೆ ಪ್ರೋತ್ಸಾಹಿಸಲು 145.92 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.
ಕೃಷಿ ತಾಂತ್ರಿಕತೆ ಗುಚ್ಚಗಳ ಅಭಿವೃದ್ಧಿಪಡಿಸಲು ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 5000 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಈ ಅನುದಾನವನ್ನು ಬಳಕೆ ಮಾಡಲಾಗುವುದು ಎಂದರು.
 ಹೆಚ್ಚಿನ ಅನುದಾನ
2019-20ನೇ ಸಾಲಿಗೆ 5,311.68 ಕೋಟಿ ರೂ.ಗಳನ್ನು ಕೃಷಿ ಕ್ಷೇತ್ರಕ್ಕಾಗಿ ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ. ರೈತ ಸಿರಿ, ಕರಾವಳಿ ಪ್ಯಾಕೇಜ್, ಸಾವಯವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆ ಮತ್ತು ಮೌಲ್ಯವರ್ಧನೆಗೆ ಪ್ರೋತ್ಸಾಹ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

Leave a Comment